ಬೆಂಗಳೂರು | ಪತ್ನಿಯ ತಲೆ ಕತ್ತರಿಸಿ ರುಂಡದ ಸಮೇತ ಪೊಲೀಸ್ ಠಾಣೆಗೆ ಬಂದ ಪತಿ!
ಸಾಂದರ್ಭಿಕ ಚಿತ್ರ
ಬೆಂಗಳೂರು : ಪತಿಯೋರ್ವ ಮಗಳ ಮುಂದೆಯೇ ತನ್ನ ಪತ್ನಿಯ ತಲೆ ಕತ್ತರಿಸಿ, ಬಳಿಕ ರುಂಡದ ಸಮೇತ ಪೊಲೀಸ್ ಠಾಣೆಗೆ ಬಂದ ಘಟನೆ ಆನೇಕಲ್ ತಾಲೂಕಿನ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಸೂರ್ಯನಗರ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದ್ದು, ಕಾಚನಾಯಕನಹಳ್ಳಿಯ ಶಂಕರ್(26) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಹೆಬ್ಬಗೋಡಿಯ ಮಾನಸಾ(26) ಕೊಲೆಯಾದ ಮಹಿಳೆ. ಐದು ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ದಂಪತಿಗೆ ನಾಲ್ಕು ವರ್ಷದ ಮಗಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋರಮಂಗಲದ ಕಂಪೆನಿಯೊಂದರಲ್ಲಿ ಆರೋಪಿ ಶಂಕರ್ ಕೆಲಸ ಮಾಡಿಕೊಂಡಿದ್ದ. ಕೊಲೆಯಾದ ಮಹಿಳೆ ಮಾನಸಾ ಕೂಡ ಬೇರೊಂದು ಕಂಪೆನಿಗೆ ಕೆಲಸಕ್ಕೆ ಹೋಗುತ್ತಿದ್ದಳು. ಅಲ್ಲಿಯೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದಳೆಂದು ಶಂಕಿಸಿ ಆರೋಪಿ ಶಂಕರ್, ಮಾರಕಾಸ್ತ್ರದಿಂದ ಆಕೆಯ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ್ದಾನೆ. ಬಳಿಕ ತಲೆಯನ್ನು ಕವರ್ ನಲ್ಲಿ ತುಂಬಿಕೊಂಡು, ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರದ ಸಮೇತ ಪೊಲೀಸ್ ಠಾಣೆಗೆ ಬಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಳಿಕ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮೋಹನ್ ಕುಮಾರ್, ಪಿಐ ಸಂದೀಪ್ ಮಹಜನ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾದ ಪ್ರಿಯಕರನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮಹಿಳೆಯ ಮೃತದೇಹವನ್ನು ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.