×
Ad

ಆ.21ರಂದು ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ಮಹಿಳಾ ಸಮಾವೇಶ : ಸುಲೇಮಾನ್ ಖಾನ್

Update: 2025-08-19 23:54 IST

ಬೆಂಗಳೂರು, ಆ.19: ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ( ಎಐಎಂಪಿಎಲ್) ವತಿಯಿಂದ ರಾಷ್ಟ್ರವ್ಯಾಪಿ ನಡೆಯುತ್ತಿರುವ ‘ವಕ್ಫ್ ರಕ್ಷಿಸಿ, ಸಂವಿಧಾನ ಉಳಿಸಿ’ ಅಭಿಯಾನದ ಅಂಗವಾಗಿ ಆ.21ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಮಹಿಳಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಕೋರ್ ಕಮಿಟಿ ಸದಸ್ಯ ಸುಲೇಮಾನ್ ಖಾನ್ ತಿಳಿಸಿದರು.

ಮಂಗಳವಾರ ನಗರದ ದಾರುಲ್ ಉಲೂಮ್ ಸಬೀಲರ‌್ರಶಾದ್(ಅರೇಬಿಕ್ ಕಾಲೇಜು)ನಲ್ಲಿ ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆ-2025ರ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ವತಿಯಿಂದ ನಿರಂತರವಾಗಿ ಹಲವಾರು ಕಾರ್ಯಕ್ರಮಗಳು, ಸಮಾವೇಶಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದೇ ರೀತಿ, ಮಹಿಳೆಯರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ದೇಶದ ವಿವಿಧ ಭಾಗಗಳಿಂದ ಉಲಮಾಗಳು, ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ ಸದಸ್ಯರು ಈ ಸಮಾವೇಶದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ವಕ್ಫ್ ತಿದ್ದುಪಡಿ ಕಾಯ್ದೆಯು ನಮ್ಮ ಶರೀಅತ್‌ನಲ್ಲಿ ಹಸ್ತಕ್ಷೇಪ ಮಾಡುವುದು ಅಲ್ಲದೇ, ಸಂವಿಧಾನದ ವಿರೋಧಿಯು ಆಗಿದೆ. ನಮ್ಮ ಶರೀಅತ್ ಹಾಗೂ ಸಂವಿಧಾನ ರಕ್ಷಿಸುವ ಉದ್ದೇಶದಿಂದ ಈ ಸಮಾವೇಶ ಮಾಡುತ್ತಿದ್ದೇವೆ. ಸಮುದಾಯದ ಮಹಿಳೆಯರಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯ ಕುರಿತು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ. ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಸುಲೇಮಾನ್ ಖಾನ್ ಮನವಿ ಮಾಡಿದರು.

ಮಹಿಳಾ ಸಮಾವೇಶದ ಸಂಚಾಲಕ ಮುಹಮ್ಮದ್ ಫಯಾಝ್ ಶರೀಫ್ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಸದಸ್ಯ ಆಸಿಮ್ ಅಫ್ರೋಝ್ ಸೇಠ್, ಜಮಾಅತೆ ಇಸ್ಲಾಮೀ ಮುಖಂಡ ಯೂಸುಫ್ ಕನ್ನಿ, ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News