×
Ad

ಮಾರಾಟ ಉತ್ಪನ್ನಗಳ ಮೇಲಿನ ಬರಹದ ಶೇ.60ರಷ್ಟು ಕನ್ನಡವಿರಲಿ: ನಾರಾಯಣಗೌಡ

Update: 2025-01-22 21:28 IST

ಬೆಂಗಳೂರು : ಕರ್ನಾಟಕದಲ್ಲಿ ಮಾರಾಟವಾಗುವ ಮತ್ತು ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ.60ರಷ್ಟು ಬರೆಹಗಳು ಕನ್ನಡದಲ್ಲಿಯೇ ಇರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನರು ತಾವು ಬಳಕೆ ಮಾಡುವ ವಸ್ತುಗಳ ಹೆಸರೇನು, ಪ್ರಮಾಣವೇನು? ಅವುಗಳ ತಯಾರಿಕೆಗೆ ಏನನ್ನು ಬಳಸಲಾಗಿದೆ ಎಂಬ ವಿಷಯಗಳು ಕನ್ನಡಿಗರಿಗೆ ಕಡ್ಡಾಯವಾಗಿ ತಿಳಿಯಬೇಕು ಎಂದು ಹೇಳಿದರು.

ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ಬಗ್ಗೆಯ ಉತ್ಪನ್ನಗಳ ಮೇಲೆ ಬರೆಯಲಾಗುವ ಹೆಸರುಗಳು, ಉತ್ಪನ್ನಗಳಿಗೆ ಸಂಬಂಧಿಸಿದ ವಿವರಗಳು, ಉತ್ಪನ್ನಗಳನ್ನು ತಯಾರು ಮಾಡಲು ಬಳಸಿದ ವಸ್ತುಗಳ ಹೆಸರು ಮತ್ತು ಪ್ರಮಾಣ, ಉತ್ಪನ್ನಗಳ ತೂಕ/ ಪ್ರಮಾಣ ಮತ್ತು ಬೆಲೆ ಎಲ್ಲವನ್ನೂ ಬಹುತೇಕ ಇಂಗ್ಲಿಷ್ ಭಾಷೆಯಲ್ಲಿ ಮುದ್ರಿಸಲಾಗುತ್ತಿದೆ. ನಾವು ಕರ್ನಾಟಕದಲ್ಲಿ ಇದ್ದೇವೋ ಅಥವಾ ಅಮೆರಿಕದಲ್ಲಿ ದ್ದೇವೋ ಎಂಬ ಅನುಮಾನ ಕಾಡುವಷ್ಟು ಇಂಗ್ಲಿಷ್ ಎಲ್ಲ ಉತ್ಪನ್ನಗಳ ಮೇಲೆ ತುಂಬಿಕೊಂಡಿವೆ. ಇದಕ್ಕೆ ಯಾರು ಕಾರಣ? ಇದನ್ನು ಯಾಕೆ ನಾವು ಸಹಿಸಿಕೊಂಡು ಬಂದಿದ್ದೇವೆ? ಸರಕಾರಗಳು ಇದನ್ನೆಲ್ಲ ನೋಡಿ ಕಣ್ಮುಚ್ಚಿ ಕುಳಿತಿರುವುದು ಯಾಕೆ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಮಾರಾಟವಾಗುವ ಮತ್ತು ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಏಜೆನ್ಸಿಗಳು ಪರಭಾಷಿಕರ ಪಾಲಾಗುತ್ತಿವೆ. ಇದು ಸಾರಾಸಗಟಾಗಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ. ಹೀಗಾಗಿ ಎಲ್ಲ ಉತ್ಪನ್ನಗಳ ಏಜೆನ್ಸಿಗಳು ಕನ್ನಡಿಗರಿಗೇ ಸಿಗಬೇಕು. ಅಥವಾ ಈ ಏಜೆನ್ಸಿಗಳಲ್ಲಿ ಕನ್ನಡಿಗರು ಪಾಲುದಾರರಾಗಿರಬೇಕು.

ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ರಾಷ್ಟ್ರೀಯ, ಖಾಸಗಿ, ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕ್‍ಗಳು, ಫೈನಾನ್ಸ್‌ಗಳು, ಜೀವವಿಮಾ, ಆರೋಗ್ಯ ವಿಮಾ ಸಂಸ್ಥೆಗಳು ಸೇರಿದಂತೆ ಇತರ ಹಣಕಾಸು ಸಂಸ್ಥೆಗಳಲ್ಲಿ ಡಾ.ಸರೋಜಿನಿ ಮಹಿಷಿ ವರದಿಯ ಶಿಫಾರಸಿನಂತೆ ಸಿ ಮತ್ತು ಡಿ ದರ್ಜೆಯ ಶೇ.100ರಷ್ಟು ಹುದ್ದೆಗಳು ಮತ್ತು ಇತರೆ ಹುದ್ದೆಗಳಲ್ಲಿ ಶೇ.60ರಷ್ಟು ಹುದ್ದೆಗಳು ಕನ್ನಡಿಗರಿಗೆ ನೀಡಬೇಕು. ಈ ಎಲ್ಲ ಸಂಸ್ಥೆಗಳು ಬಳಸುವ ಗ್ರಾಹಕರಿಗೆ ನೀಡುವ ಎಲ್ಲ ದಾಖಲೆಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‍ಗಳು ಕನ್ನಡ ರಾಜ್ಯದ ಆಡಳಿತ ಭಾಷೆ ಎಂಬುದನ್ನು ಮರೆತು ವ್ಯವಹರಿಸುತ್ತಿವೆ. ಅದರ ಜೊತೆಗೆ ಖಾಸಗಿ, ಗ್ರಾಮೀಣ, ಸಹಕಾರಿ ಬ್ಯಾಂಕ್‍ಗಳು, ಫೈನಾನ್ಸ್‍ಗಳು ಸೇರಿದಂತೆ ಹಣಕಾಸು ಸಂಸ್ಥೆಗಳಲ್ಲಿ ಕನ್ನಡ ಬಳಕೆ ಕಡಿಮೆಯಾಗಿದ್ದು, ಎಲ್ಲ ಆಡಳಿತ ಕನ್ನಡದಲ್ಲೇ ನಡೆಯಬೇಕು.

ಎಲ್ಲ ಹಕ್ಕೊತ್ತಾಯಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ, ಕಾರ್ಪೊರೇಟ್, ಹಣಕಾಸು ಸಂಸ್ಥೆಗಳು ಕೂಡಲೇ ಈಡೇರಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಂತ ಹಂತವಾಗಿ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News