ಮುಸ್ಲಿಮ್ ಶೈಕ್ಷಣಿಕ ಸಂಸ್ಥೆಗಳ ಒಗ್ಗಟ್ಟಿನಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ : ನಸೀರ್ ಅಹ್ಮದ್
ಬೆಂಗಳೂರು : ಖಾಸಗಿ ಅನುದಾನರಹಿತ ಶಾಲೆಗಳು ಸೀಮಿತ ಸಂಪನ್ಮೂಲಗಳ ನಡುವೆಯೂ ಉತ್ತಮ ಫಲಿತಾಂಶಗಳನ್ನು ನೀಡುತ್ತಿವೆ, ಇದು ಅವುಗಳ ಪರಿಶ್ರಮ, ಶಿಸ್ತು ಮತ್ತು ಶೈಕ್ಷಣಿಕ ಬದ್ಧತೆಗೆ ಸಾಕ್ಷಿ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ತಿಳಿಸಿದ್ದಾರೆ.
ರವಿವಾರ ನಗರದ ಎಚ್.ಬಿ.ಆರ್.ಬಡಾವಣೆಯಲ್ಲಿರುವ ಬ್ಯಾರೀಸ್ ಸೌಹಾರ್ದ ಭವನದಲ್ಲಿ ಫೆಡರೇಶನ್ ಆಫ್ ಮೈನಾರಿಟೀಸ್ ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್, ಕರ್ನಾಟಕ ಚಾಪ್ಟರ್ (ಫೆಮಿ)ನ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶಾಲಾ ನಾಯಕತ್ವ ಪ್ರಶಸ್ತಿ ಸಮಾವೇಶ-2026 ಅನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ಈ ಸಂಸ್ಥೆಗಳು ಪ್ರಮುಖ ಸ್ಥಾನ ಪಡೆದಿವೆ. ಮುಸ್ಲಿಮ್ ಶೈಕ್ಷಣಿಕ ಸಂಸ್ಥೆಗಳು ಒಗ್ಗಟ್ಟಿನಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಫೆಮಿಯ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ನಸೀರ್ ಅಹ್ಮದ್ ಹೇಳಿದರು.
ಫೆಮಿ ಕರ್ನಾಟಕ ಚಾಪ್ಟರ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆಸಿಫುದ್ದೀನ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ನಡೆಸಿರುವ ಈ ಶಾಲಾ ನಾಯಕತ್ವ ಪ್ರಶಸ್ತಿ ಸಮಾವೇಶದ ಮುಖ್ಯ ಉದ್ದೇಶವು ಮುಸ್ಲಿಮ್ ಶೈಕ್ಷಣಿಕ ಸಂಸ್ಥೆಗಳ ಸೇವೆಗಳನ್ನು ಗುರುತಿಸಿ, ಪ್ರಶಸ್ತಿಯನ್ನು ನೀಡುವ ಮೂಲಕ ಅವರ ಸೇವೆಯನ್ನು ಗುರುತಿಸುವುದಾಗಿದೆ. ಈ ಮೂಲಕ ಅವರ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಫೆಮಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸೈಯದ್ ತನ್ವೀರ್ ಅಹ್ಮದ್, ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ಒ ಇಮಾಮ್ ಮೌಲಾನಾ ಡಾ.ಮುಹಮ್ಮದ್ ಮಕ್ಸೂದ್ ಇಮ್ರಾನ್ ರಶಾದಿ, ಮನ್ಸೂರಾ ಎಜುಕೇಷನಲ್ ಆಂಡ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಡಾ.ಬೆಳಗಾಮಿ ಮುಹಮ್ಮದ್ ಸಾದ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತಖ್ವಾ ಎಜುಕೇಷನಲ್ ಟ್ರಸ್ಟ್‌ನ ಟ್ರಸ್ಟಿ ಡಾ.ಮುಹಮ್ಮದ್ ತಾಹಾ ಮತೀನ್ ಮಾತನಾಡಿದರು.
ಈ ಸಮಾವೇಶದಲ್ಲಿ ಬೆಂಗಳೂರಿನ 150ಕ್ಕೂ ಹೆಚ್ಚು ಮುಸ್ಲಿಮ್ ಶೈಕ್ಷಣಿಕ ಸಂಸ್ಥೆಗಳ ಹೊಣೆಗಾರರು ಹಾಗೂ ಶಿಕ್ಷಣ ತಜ್ಞರು ಭಾಗವಹಿಸಿದ್ದರು.
ಡಾ.ಬೆನಝೀರ್, ಫೆಮಿ ಬೆಂಗಳೂರು ಘಟಕದ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಕಾರ್ಯದರ್ಶಿ ಹಾರೂನ್ ಬಾಷಾ, ಮೌಲಾನಾ ಅಬ್ದುಲ್ ಗಫ್ಫಾರ್ ಹಾಮಿದ್ ಉಮರಿ, ರಿಯಾಝ್ ಅಹ್ಮದ್ ರೋಣ, ಸೈಯದ್ ಬಶಾರತ್ ಅಹ್ಮದ್, ಅಸ್ಲಂ ಹೈಕಾಡಿ ಉಡುಪಿ, ಅತೀಕ್ ಪಾಷಾ, ರೇಷ್ಮಾ ಇಕ್ಬಾಲ್, ಸೈಯದ್ ಇಜಾಝ್, ಸೈಯದ್ ಮುನೀರ್, ಝುಲ್ಫಿಕರ್ ಅಹ್ಮದ್, ಡಾ.ಝುಹೈಬ್ ಜಾವೇದ್ ಖಾನ್, ಮುಹಮ್ಮದ್ ಅಲ್ತಾಫ್ ಅಹ್ಮದ್, ಇಫ್ತಿಖಾರ್ ಶರೀಫ್ ಹಾಗೂ ಇತರರು ಉಪಸ್ಥಿತರಿದ್ದರು. ಡಾ.ಫರೀದಾ ರಹ್ಮತುಲ್ಲಾಹ್ ಧನ್ಯವಾದಗಳನ್ನು ಸಲ್ಲಿಸಿದರು.
ಬೇಡಿಕೆಗಳು
ಶಾಲೆಗಳ ನವೀಕರಣ ಮಾನ್ಯತೆ ಪ್ರಕ್ರಿಯೆಯಲ್ಲಿ ಸಡಿಲಿಕೆ ನೀಡಬೇಕು, ಅಲ್ಪಸಂಖ್ಯಾತರ ಸ್ಥಾನಮಾನ ಪ್ರಮಾಣಪತ್ರದ ಜಾರಿಯನ್ನು ಸುಲಭಗೊಳಿಸಬೇಕು, ಪ್ರೀ-ಮೆಟ್ರಿಕ್ ವಿದ್ಯಾರ್ಥಿವೇತನದ ಬಜೆಟ್ ಅನ್ನು 2026-27ರಲ್ಲಿ 1000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿಸಬೇಕು, ಮುಸ್ಲಿಮ್ ಶಾಲೆಗಳಿಗೆ ಸರಕಾರಿ ಭೂಮಿಯ ಹಂಚಿಕೆ ಹಾಗೂ ಮೂಲಸೌಕರ್ಯಕ್ಕಾಗಿ ಅನುದಾನಗಳನ್ನು ಒದಗಿಸಬೇಕು. ಪೋಸ್ಟ್-ಮೆಟ್ರಿಕ್ ಹಾಗೂ ಉನ್ನತ ಶಿಕ್ಷಣ (ಓವರ್‌ಸೀಸ್ ಯೋಜನೆ) ಬಜೆಟ್ ಅನ್ನು ದ್ವಿಗುಣಗೊಳಿಸಬೇಕು, ದೀನೀ ಮದರಸಾಗಳ ಆಧುನೀಕರಣಕ್ಕಾಗಿ ಅರ್ಜಿಗಳನ್ನು ಮಧ್ಯವರ್ತಿ ಸಂಸ್ಥೆಗಳನ್ನು ತಪ್ಪಿಸಿ ನೇರವಾಗಿ (ಆನ್‌ಲೈನ್) ಮದ್ರಸಾಗಳಿಂದಲೇ ಸ್ವೀಕರಿಸಬೇಕು ಎಂಬ ಬೇಡಿಕೆಗಳನ್ನು ಸಮಾವೇಶದಲ್ಲಿ ಸಲ್ಲಿಸಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ನಸೀರ್ ಅಹ್ಮದ್, ಶಿಕ್ಷಣ ಸಚಿವರು ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರೊಂದಿಗೆ ಚರ್ಚಿಸಿ ಈ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.