×
Ad

ಮಂಗಳೂರಿನಲ್ಲಿ ಸುರಿಯಲಾಗುತ್ತಿದೆ ನೆರೆ ರಾಜ್ಯದ ತ್ಯಾಜ್ಯ : ಪ್ರಕರಣ ದಾಖಲಿಸಲು ಈಶ್ವರ್ ಖಂಡ್ರೆ ಸೂಚನೆ

Update: 2025-02-15 23:31 IST

ಬೆಂಗಳೂರು : ನೆರೆ ರಾಜ್ಯದಿಂದ ಅಪಾಯಕಾರಿ ದ್ರವ ತ್ಯಾಜ್ಯವನ್ನು ಟ್ಯಾಂಕರ್‍ಗಳಲ್ಲಿ ತಂದು ಮಂಗಳೂರಿನ ಚರಂಡಿ ಮತ್ತು ರಾಜಕಾಲುವೆಗೆ ಸುರಿಯಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಈ ಬಗ್ಗೆ ಜಲ ಕಾಯಿದೆ ಅಡಿ ಪ್ರಕರಣ ದಾಖಲಿಸಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚರಂಡಿ, ರಾಜಕಾಲುವೆಗಳಿಗೆ ಸುರಿದ ದ್ರವ ತ್ಯಾಜ್ಯ, ನದಿ, ಕೆರೆ, ಸಮುದ್ರ ಸೇರಿ ಜಲ ಚರಗಳ ಮತ್ತು ಜಾನುವಾರುಗಳ ಸಾವಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಕೂಡಲೇ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಜಲ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು.

ದ್ರವ ತ್ಯಾಜ್ಯವನ್ನು ಬತ್ತಿ ಹೋದ ಬೋರ್‍ವೆಲ್‍ಗಳಲ್ಲಿ, ಚರಂಡಿಗಳಲ್ಲಿ, ಕೆರೆ, ಕುಂಟೆ ಸೇರಿದಂತೆ ಯಾವುದೇ ಜಲ ಮೂಲಕ್ಕೆ ಹರಿಸುವುದು ಅಪರಾಧವಾಗಿರುತ್ತದೆ. ಈ ರೀತಿ ಕಾನೂನು ಬಾಹಿರವಾಗಿ ತ್ಯಾಜ್ಯ ಸುರಿಯುವವರ ವಿರುದ್ಧ ಪರಿಸರ ಸಂರಕ್ಷಣಾ ಕಾಯಿದೆ ಅಡಿಯಲ್ಲೂ ಕ್ರಮ ಜರುಗಿಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ರಾಜ್ಯ ಸರಕಾರ ಪ್ರಕೃತಿ ಪರಿಸರ ಸಂರಕ್ಷಣೆಗೆ ಬದ್ಧವಾಗಿದ್ದು, ಈ ರೀತಿಯ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು, ಪಲೀಸರು ಕೂಡ ಈ ನಿಟ್ಟಿನಲ್ಲಿ ಕಾನೂನು ಕ್ರಮ ಜರುಗಿಸುತ್ತಾರೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News