ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧ: ಕೆ.ವಿ.ಪ್ರಭಾಕರ್
ಬೆಂಗಳೂರ, ಫೆ. 20: ‘ಪತ್ರಕರ್ತರು ಮತ್ತು ಪತ್ರಿಕೆಗೆ ಸಂಬಂಧಿಸಿದ ಯಾವುದೇ ವೃತ್ತಿಯ ಸಮಸ್ಯೆಗಳಿದ್ದರೂ ಸ್ಪಂದಿಸಲು ನಾನು ಸದಾ ಸಿದ್ದ’ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಗಾಂಧಿಭವನದಲ್ಲಿ ನಡೆದ ವಿಪ್ರ ಪತ್ರಕರ್ತರ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಣ್ಣ ಪತ್ರಿಕೆಗಳ ಸಮಸ್ಯೆ ಕುರಿತು ನನಗೆ ಅರಿವಿದೆ. ನಾನೂ ಪೇಪರ್ ಹಾಕುವ ಕೆಲಸ ಮಾಡಿಕೊಂಡು ತಳಮಟ್ಟದಿಂದ ಈ ಸ್ಥಾನದ ವರೆಗೂ ಬಂದಿದ್ದೇನೆ. ಹೀಗಾಗಿ ಪತ್ರಿಕೆಗಳ ಮತ್ತು ಪತ್ರಕರ್ತರ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನ್ಯಾಯವಾಗಿ ಸ್ಪಂದಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ನುಡಿದರು.
ಪತ್ರಿಕೆಗಳ ಜಾಹೀರಾತು ದರ ಪರಿಸ್ಕರಣೆ ಕುರಿತು ಈಗಾಗಲೇ ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ಸಕಾರತ್ಮಕವಾಗಿ ಸ್ಪಂದನೆ ಸಿಕ್ಕಿದೆ. ಡಿಜಿಟಲ್ ಮಾಧ್ಯಮಗಳಿಗೂ ಜಾಹಿರಾತು ನೀತಿಯ ಕರಡು ಸಿದ್ದಗೊಳ್ಳುತ್ತಿದೆ. ಶೀಘ್ರದಲ್ಲಿ ಅದು ಜಾರಿಗೆ ಬರುವ ವಿಶ್ವಾಸವಿದೆ ಎಂದು ತಿಳಿಸಿದರು.
ಇದೇ ವೇಳೆ ಸಿಎಂ ಮಾಧ್ಯಮ ಸಲಹೆಗಾರರ ವಿಶೇಷಾಧಿಕಾರಿ ಕೆ.ಪಿ.ಪುಟ್ಟಸ್ವಾಮಯ್ಯ ಅವರನ್ನೂ ವಿಪ್ರ ಅಭಿನಂದಿಸಲಾಯಿತು. ಈ ವೇಳೆ ಪತ್ರಕರ್ತರಾದ ಮುರಳಿ ಪ್ರಸಾದ್, ರೋಹಿಣಿ ಸೀತಾರಾಮ್, ಅನುಸೂಯ ಎನ್.ಮೂರ್ತಿ, ಅನಿಲ್ ಕುಮಾರ್, ಹನುಮೇಶ್ ಯಾವಗಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.