×
Ad

ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ಬಿಜೆಪಿಯ ಸೋಮಶೇಖರ್, ಶಿವರಾಂ ಹೆಬ್ಬಾರ್

Update: 2024-05-13 21:58 IST

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಬಹಿರಂಗವಾಗಿಯೇ ಕೆಲಸ ಮಾಡಿದ್ದ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್, ಯಲ್ಲಾಪುರ ಕ್ಷೇತ್ರದ ಬಿಜೆಪಿಯ ಶಾಸಕ ಶಿವರಾಂ ಹೆಬ್ಬಾರ್, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ನೇತೃತ್ವದ ಸರಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದರೆ, ಅದಕ್ಕೆ ವಿರುದ್ಧವಾದ ರಾಜಕೀಯ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಬಿಜೆಪಿ-ಜೆಡಿಎಸ್‍ನ ಅನೇಕ ಶಾಸಕರು ಕಾಂಗ್ರೆಸ್ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ. ಚುನಾವಣೆಯ ಫಲಿತಾಂಶ ನೋಡಿಕೊಂಡು ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಸೋಮವಾರ ಇಲ್ಲಿನ ಸದಾಶಿವನಗರದಲ್ಲಿನ ಡಿ.ಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿದ ಬಿಜೆಪಿಯ ಇಬ್ಬರು ಶಾಸಕರು, ಪರಿಷತ್ತಿನ ಆರು ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ ಸಂಬಂಧ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ. ಈ ಹಿಂದೆ ಆಪರೇಷನ್ ಕಮಲಕ್ಕೆ ತುತ್ತಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ 17 ಶಾಸಕರ ಪೈಕಿ ಪುನರ್ ಆಯ್ಕೆಯಾಗಿರುವ ಇನ್ನೂ ಕೆಲವರು ಕಾಂಗ್ರೆಸ್‍ನತ್ತ ಮರಳಲು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ನಿಂತಿರುವ ಬಿಜೆಪಿಯ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಸದ್ಯಕ್ಕೆ ಬಿಜೆಪಿಯಲ್ಲೇ ಮುಂದುವರಿಯಲಿದ್ದಾರೆ. ಆ ಪಕ್ಷದಲ್ಲಿ ತಟಸ್ಥವಾಗಿಯೇ ಇರಲಿದ್ದು, ಚುನಾವಣೆ ಫಲಿತಾಂಶವನ್ನು ಆಧರಿಸಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆ ಸಂಬಂಧ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News