×
Ad

ದ್ವೇಷದ ಜ್ವಾಲೆ ಮನೆ-ಮನಗಳನ್ನು ಸುಡುತ್ತದೆ : ಬಿ.ಕೆ.ಹರಿಪ್ರಸಾದ್

Update: 2024-05-15 22:28 IST

ಬೆಂಗಳೂರು : ‘ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದ ಅನ್ಯ ಸಮುದಾಯಗಳ ವಿರುದ್ಧ ಕೇವಲ ಅಧಿಕಾರಕ್ಕಾಗಿ ಹಚ್ಚಿರುವ ಕೋಮು ದ್ವೇಷದ ಜ್ವಾಲೆ ಮನೆ-ಮನಗಳನ್ನು ಸುಡುತ್ತಿದೆ. ಇದು ಭವಿಷ್ಯಕ್ಕೆ ಮಾರಕ’ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್‍ನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಎಚ್ಚರಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪ್ರಧಾನಿ ಮೋದಿ ವಿಭಜನೆ ಮಾಡುವುದಿಲ್ಲ ಹೇಳಿಕೆ ನೀಡಿದ್ದಾರೆ. ಆದರೆ, ಸದಾ ದ್ವೇಷದ ಮಾತುಗಳನ್ನಾಡುತ್ತಿದ್ದಾರೆ. ಕರೆಯದಿದ್ದರೂ ಬಿರಿಯಾನಿ ತಿನ್ನಬೇಕೆನಿಸಿದರೆ ಪಾಕಿಸ್ತಾನದ ಪ್ರಧಾನಿ ಮೊಮ್ಮಗಳ ಮದುವೆಯ ಬಿರಿಯಾನಿಗೂ ಅವರು ಹಾಜರಾಗುತ್ತಾರೆ ಎಂದು ಟೀಕಿಸಿದರು.

ಈದ್, ಮೊಹರಂ ಹಬ್ಬಗಳಲ್ಲಿ ಮೋದಿಗೆ ಅಕ್ಕ-ಪಕ್ಕದ ಮುಸ್ಲಿಮ್ ಸಮುದಾದಯವರ ಮನೆಗಳಿಂದಲೇ ಊಟ ಬರುತ್ತಿತ್ತಂತೆ. ಪ್ರಧಾನಿ ಮೋದಿಯವರೇ, ಇದು ಕೇವಲ ನಿಮ ಮನೆಯ ಉದಾಹರಣೆಯಲ್ಲ, ಭಾರತದ ಸಂಸ್ಕೃತಿಯೇ ಇದು. ನೆರೆ-ಹೊರೆಯವರು ಜಾತಿ, ಮತ, ಭೇದವಿಲ್ಲದೇ ಬದುಕು ಕಟ್ಟಿಕೊಂಡಿದ್ದೇ ಈ ಕೊಡು-ಕೊಳ್ಳುವ ಪರಂಪರೆಯಿಂದ ಎಂದು ಹರಿಪ್ರಸಾದ್ ತಿಳಿಸಿದರು.

‘ಉಂಡ ಮನೆಗೆ ದ್ರೋಹ ಬಗೆಯುವುದು, ಕಟ್ಟಿಕೊಂಡ ಪತ್ನಿ, ನಂಬಿಕೊಂಡ ತಂದೆ-ತಾಯಿಯನ್ನು ನಡು ನೀರಿನಲ್ಲಿ ಕೈಬಿಡುವುದು ಭಾರತೀಯ ಸಂಸ್ಕೃತಿಯೇ ಅಲ್ಲ. ಭಾರತದ ಮೂಲ ಸಂಸ್ಕೃತಿಯನ್ನು ಉಳಿಸಿದ ಹೆಮ್ಮೆ ಕಾಂಗ್ರೆಸ್ ಪಕ್ಷಕ್ಕಿದೆ. ಹಿಂದೂ-ಮುಸ್ಲಿಮ್ ಸೇರಿದಂತೆ ಎಲ್ಲ ಜಾತಿ-ಧರ್ಮದ ಜನರ ಭಾವನೆಗಳಿಗೆ ಗೌರವ ನೀಡಿದ ಹೆಮ್ಮಯೂ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ಅವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News