×
Ad

ಕಾಲ್ತುಳಿತ ಘಟನೆಗೆ ಮುನ್ನ ಪೊಲೀಸರು ನೀಡಿದ ಸೂಚನೆಗಳನ್ನು ರಾಜ್ಯ ಸರಕಾರ ಉಲ್ಲಂಘಿಸಿದೆ: ಆರ್.ಅಶೋಕ್ ಆರೋಪ

Update: 2025-06-08 15:23 IST

ಬೆಂಗಳೂರು, ಜೂ.8: ಕಾಲ್ತುಳಿತದ ಘಟನೆಗೆ ಮುನ್ನ ಪೊಲೀಸರು ನೀಡಿದ ಸೂಚನೆಗಳನ್ನು ಕಾಂಗ್ರೆಸ್ ಸರ್ಕಾರ ಉಲ್ಲಂಘಿಸಿದೆ. ಈ ಮೂಲಕ ಸರ್ಕಾರವೇ ಕಾನೂನು ಮೀರಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಶಕ್ತಿಗಳ ತಿಕ್ಕಾಟ ಇಲ್ಲದಿದ್ದರೆ ವಿದ್ಯಾರ್ಥಿಗಳು ಸಾಯುತ್ತಿರಲಿಲ್ಲ. ಅವರ ಕುಟುಂಬದವರಿಗೆ ಸಾಂತ್ವನ ಹೇಳಬೇಕಿದ್ದವರು ಕಪ್ ಗೆ ಮುತ್ತಿಡುತ್ತಿದ್ದರು. ಮಧ್ಯಾಹ್ನವೇ ಮೊದಲ ಸಾವಾದಾಗ ಪೊಲೀಸರು ಮಾಹಿತಿ ನೀಡಿದ್ದರು. ಕಾರ್ಯಕ್ರಮ ಆರಂಭವಾದಾಗಲೇ ಎಂಟು ಮಕ್ಕಳು ಮೃತಪಟ್ಟಿದ್ದರು. ಆ ನಂತರವೂ ಕಾರ್ಯಕ್ರಮ ಮಾಡುತ್ತಾರೆಂದರೆ ಇವರೆಲ್ಲರೂ ಕಟುಕ, ಕಲ್ಲಿನ ಹೃದಯದವರು ಎಂದು ದೂರಿದರು.

ಕಾನೂನನ್ನು ಪೊಲೀಸ್ ಅಧಿಕಾರಿಗಳು ಜಾರಿ ಮಾಡುತ್ತಾರೆ. 4-6-2025 ರಂದು ವಿಧಾನಸೌಧದ ಪೊಲೀಸರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಆತುರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಹಾಗೂ ಸಿಬ್ಬಂದಿ ಕೊರತೆ ಇರುವುದರಿಂದ ಬಂದೋಬಸ್ತ್ ಕರ್ತವ್ಯಕ್ಕೆ ತೊಂದರೆಯಾಗಲಿದೆ ಎಂದು ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇದನ್ನು ನಿಷೇಧಿಸಬೇಕು ಎಂದೂ ಹೇಳಲಾಗಿದೆ. ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ಆಗ ಕಾನೂನು ಪುಸ್ತಕ ತೋರಿಸಿದ್ದರು. ಈಗ ಸರಕಾರವೇ ಕಾನೂನು ಉಲ್ಲಂಘಿಸಿದೆ ಎಂದು ಆಕ್ರೋಶ ಹೊರಹಾಕಿದರು.

ಇಲಾಖೆಯ ಸಿಬ್ಬಂದಿ ಹಾಗೂ ಕುಟುಂಬದವರು ಬರಬಾರದು ಎಂದು ಕೂಡ ಪೊಲೀಸರು ಸೂಚಿಸಿದ್ದರು. ಆದರೆ ಅಲ್ಲಿ ಎಲ್ಲರ ಕುಟುಂಬದವರು ಇದ್ದರು. ಸಿಸಿಟಿವಿ ಕ್ಯಾಮರಾ ಬೇಕೆಂದು ಹೇಳಿದ್ದರೂ ಅದನ್ನು ಪಾಲಿಸಿಲ್ಲ. ಡ್ರೋನ್ ಗೆ ಅವಕಾಶ ಇಲ್ಲ ಎಂದು ಹೇಳಲಾಗಿದೆ. ಈ ಎಲ್ಲ ಸೂಚನೆಗಳನ್ನು ಸರಕಾರ ಹರಿದು ಬಿಸಾಕಿದೆ. ವೇದಿಕೆಯಲ್ಲಿ 20, 30 ಜನರು ಮಾತ್ರ ಇರಬೇಕು ಎಂಬ ಸೂಚನೆಯನ್ನು ಸಂಪೂರ್ಣ ಉಲ್ಲಂಘಿಸಿದ್ದು, 11 ಆಟಗಾರರು ಸೇರಿದಂತೆ ಒಟ್ಟು 200 ಜನರು ವೇದಿಕೆಯಲ್ಲಿದ್ದರು. ಇದು ಸರಕಾರಿ ಕಾರ್ಯಕ್ರಮ ಎಂದು ಆದೇಶ ಪತ್ರದಲ್ಲಿದ್ದರೂ, ಸಿಎಂ ಸಿದ್ದರಾಮಯ್ಯ ಸರಕಾರಿ ಕಾರ್ಯಕ್ರಮ ಅಲ್ಲ ಎಂದಿದ್ದಾರೆ ಎಂದು ಅಶೋಕ್ ದೂರಿದರು.

ಇಷ್ಟೆಲ್ಲ ಕಾನೂನು ಉಲ್ಲಂಘನೆ ಮಾಡಿದ್ದರೂ, ಕೊನೆಗೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ರಸ್ತೆಯಲ್ಲಿ ನಿಂತು ಟ್ರಾಫಿಕ್ ನಿಯಂತ್ರಿಸುತ್ತಿದ್ದ ಪೊಲೀಸರ ವಿರುದ್ಧ ಕ್ರಮ ವಹಿಸಲಾಗಿದೆ. ಠಾಣೆ ಪೊಲೀಸರನ್ನು ಕೂಡ ಅಮಾನತು ಮಾಡಿದ್ದಾರೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ವಿಶೇಷ ಅಧಿವೇಶನ ಕರೆಯಿರಿ

ಸರಕಾರ ಮಾಡಿದ ತಪ್ಪುಗಳ ಬಗ್ಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕಾಗಿ ವಿಶೇಷ ಅಧಿವೇಶನ ಕರೆದು ಚರ್ಚಿಸಬೇಕು. ಮೂರು ತನಿಖೆಗೆ ಆದೇಶಿಸಿದ್ದು, ಇದರಲ್ಲಿ ಯಾವ ತನಿಖೆ ನಿಜ ಎಂದು ಗೊತ್ತಾಗಿಲ್ಲ. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕಿದೆ. ಈ ಕುರಿತು ನಾವೆಲ್ಲರೂ ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದರು.

ಸರಕಾರ ಪಾಪರ್ ಆಗಿಲ್ಲ ಎಂದಾದರೆ ಒಂದು ಕೋಟಿ ರೂ. ಪರಿಹಾರ ನೀಡಲಿ. ನಾವೆಲ್ಲರೂ ಒಂದು ತಿಂಗಳ ಸಂಬಳವನ್ನು ಸಂತ್ರಸ್ತ ಕುಟುಂಬಕ್ಕೆ ನೀಡಲಿದ್ದೇವೆ ಎಂದು ಅಶೋಕ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News