×
Ad

ಬೆಂಗಳೂರಿನಲ್ಲಿ ಕ್ವಾಂಟಮ್ ಸಿಟಿ ಸ್ಥಾಪನೆ : ಸಚಿವ ಎನ್.ಎಸ್.ಭೋಸರಾಜು

Update: 2025-07-31 20:01 IST

ಬೆಂಗಳೂರು : ಸರಕಾರವು ಕ್ವಾಂಟಮ್ ಕಂಪ್ಯೂಟರ್ ಕ್ಷೇತ್ರದಲ್ಲಿ ಕರ್ನಾಟಕವನ್ನು ಅಭಿವೃದ್ಧಿಪಡಿಸಲು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಬೆಂಗಳೂರಿನ ಬಳಿ ಎಲ್ಲ ಮೂಲ ಸೌಕರ್ಯಗಳಿರುವ ಕ್ಯೂ-ಸಿಟಿಯನ್ನು(ಕ್ವಾಂಟಮ್‍ಸಿಟಿ) ಸ್ಥಾಪಿಸಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಹೇಳಿದ್ದಾರೆ.

ಗುರುವಾರ ಇಲ್ಲಿನ ಖಾಸಗಿ ಹೊಟೇಲ್‍ನಲ್ಲಿ ನಡೆದ ‘ಕ್ವಾಂಟಮ್ ಇಂಡಿಯಾ ಬೆಂಗಳೂರು-2025’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2035ರ ವೇಳೆಗೆ ಜಾಗತಿಕ ಕ್ವಾಂಟಮ್ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಶೇ.20ರಷ್ಟು ಪಾಲನ್ನು ಕರ್ನಾಟಕದ್ದಾಗಿಸಲು ಗುರಿ ಇಟ್ಟುಕೊಂಡು, ಅದಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ ಎಂದರು.

ನಮ್ಮ ಸರಕಾರವು ಕ್ವಾಂಟಮ್ ನಗರಿಯನ್ನು ಬೆಂಗಳೂರಿನ ಬಳಿ ಸ್ಥಾಪಿಸಲಿದ್ದು, ಇಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸಲಾಗುವುದು. ಇದು ಶೈಕ್ಷಣಿಕ ಸಂಸ್ಥೆಗಳು, ನಾವೀನ್ಯತಾ ಕೇಂದ್ರಗಳು, ಕ್ವಾಂಟಮ್ ಹಾರ್ಡ್‍ವೇರ್‍ಗಳಿಗಾಗಿ ಉತ್ಪಾದನಾ ಕ್ಲಸ್ಟರ್‍ಗಳು ಹಾಗೂ ಕ್ವಾಂಟಮ್ ಎಚ್.ಪಿ.ಸಿ. ಡೇಟಾ ಕೇಂದ್ರಗಳ ಸಹಯೋಗದೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಕ್ಲಸ್ಟರ್‍ಗಳನ್ನು ಸಂಯೋಜಿಸಲಿದೆ ಎಂದು ಅವರು ವಿವರಿಸಿದರು.

ನಗರದಲ್ಲಿ ಪ್ರಮುಖ ವಿಜ್ಞಾನ ಸಂಸ್ಥೆಗಳು, ಹಲವಾರು ಸ್ಟಾರ್ಟಪ್‍ಗಳು, ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳಿದ್ದು, ಭಾರತದ ಕ್ವಾಂಟಮ್ ರಾಜಧಾನಿಯಾಗಿ ಹೊರಹೊಮ್ಮುತ್ತಿದೆ. ನಗರದಲ್ಲಿ ಸ್ಥಳೀಯವಾಗಿ ನಿರ್ಮಿಸಲಾದ ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್ ಈಗಾಗಲೇ ತನ್ನ ವಾಣಿಜ್ಯ ಸೇವೆಗಳನ್ನು ಒದಗಿಸುತ್ತಿದೆ. ನಮ್ಮ ಕನ್ನಡಿಗ ಮತ್ತು ನಮ್ಮ ಸ್ವದೇಶಿ ಉದ್ಯಮವು ಅಭಿವೃದ್ಧಿಪಡಿಸಿದ ಈ ಕ್ವಾಂಟಮ್ ಕಂಪ್ಯೂಟರ್ ಕೇವಲ ಪರಿಕಲ್ಪನೆಯ ಪುರಾವೆಯಲ್ಲ, ಇದು ದೃಢನಿಶ್ಚಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರವು ಐಐಎಸ್‍ಸಿಯ ಕ್ವಾಂಟಮ್ ಸಂಶೋಧನಾ ಉದ್ಯಾನವನವನ್ನು ಸ್ಥಾಪಿಸುವ ಮೂಲಕ ಈ ತಂತ್ರಜ್ಞಾನಕ್ಕೆ ಈಗಾಗಲೇ ಮಹತ್ವದ ಬದ್ಧತೆಯನ್ನು ತೋರಿದೆ. ಈ ಸೌಲಭ್ಯವು 55ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು ಮತ್ತು 13 ಸ್ಟಾರ್ಟಪ್‍ಗಳನ್ನು ಬೆಂಬಲಿಸಿದೆ. ವಾರ್ಷಿಕ 1,000ಕ್ಕೂ ಹೆಚ್ಚು ಕ್ವಾಂಟಮ್ ತಜ್ಞರಿಗೆ ತರಬೇತಿ ನೀಡುತ್ತಿದೆ. ದೀರ್ಘಾವಧಿಯಲ್ಲಿ ಇದನ್ನು ಮುಂದುವರಿಸಲು ನಮ್ಮ ಸರಕಾರವು 48 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಿದೆ ಎಂದು ಎನ್.ಎಸ್. ಭೋಸರಾಜು ತಿಳಿಸಿದರು.

ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೃಷ್ಟಿಕೋನವನ್ನು ಸಾಕಾರಗೊಳಿಸಲು ಈಗಾಗಲೇ ಕ್ವಾಂಟಮ್ ಮಾರ್ಗಸೂಚಿಯನ್ನು ಹೊರತರಲಾಗಿದೆ. ತಂತ್ರಜ್ಞಾನದ ಪ್ರಗತಿಗೆ ಸೂಕ್ತ ಅಡಿಪಾಯ ಹಾಕಿ, ಮೂಲ ಸೌಕರ್ಯ ಒದಗಿಸುವುದು, ಸಂಶೋಧನೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡಿ ಕರ್ನಾಟಕವನ್ನು ಕ್ವಾಂಟಮ್ ಪವರ್‍ಹೌಸ್ ಮತ್ತು ರಫ್ತು ತಾಣವಾಗಿ ಅಭಿವೃದ್ಧಿಪಡಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಈ ವರ್ಷಾಂತ್ಯದ ವೇಳೆಗೆ ಕ್ವಾಂಟಮ್ ಚಿಪ್ ಫ್ಯಾಬ್ರಿಕೇಶನ್ ಸಾಮಥ್ರ್ಯಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಜಾಗತಿಕ ಕ್ವಾಂಟಮ್ ಪವರ್‍ಹೌಸ್ ಆಗಿ ಕರ್ನಾಟಕವನ್ನು ಕೊಂಡೊಯ್ಯಲು ಉನ್ನತ ಮಾಧ್ಯಮಿಕ ಮಟ್ಟದಲ್ಲಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸ್ಟ್ರೀಮ್ ಲ್ಯಾಬ್ಸ್ ಉಪಕ್ರಮದ ಮೂಲಕ ಕ್ವಾಂಟಮ್ ಪಠ್ಯಕ್ರಮ ಪರಿಚಯಿಸಲಾಗುವುದು ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರವು ಸುಮಾರು 6 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಕ್ವಾಂಟಮ್ ಮಿಷನ್ ಆರಂಭಿಸಿದ್ದು, ಇದರ ಯಶಸ್ವಿ ಅನುಷ್ಠಾ ನಕ್ಕಾಗಿ ಮತ್ತು ರಾಜ್ಯಗಳನ್ನು ಬೆಂಬಲಿಸಲು ಕರ್ನಾಟಕದ ನೇತೃತ್ವದಲ್ಲಿ ನಾವೀನ್ಯತೆ ಮತ್ತ ವಿಕೇಂದ್ರೀಕೃತ ವಿಧಾನಗಳನ್ನು ಅಳವಡಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News