×
Ad

‘ಒಳಮೀಸಲಾತಿ’ ಬಿಜೆಪಿ ಪ್ರತಿಭಟನೆ ಅನಾವಶ್ಯಕ : ಸಚಿವ ಕೆ.ಎಚ್.ಮುನಿಯಪ್ಪ

Update: 2025-07-31 22:24 IST

ಬೆಂಗಳೂರು : ಒಳಮೀಸಲಾತಿ ವಿಚಾರ ಮುಂದಿಟ್ಟುಕೊಂಡು ಬಿಜೆಪಿಯವರು ನಾಳೆ(ಆ.1) ಹಮ್ಮಿಕೊಂಡಿರುವ ಪ್ರತಿಭಟನೆ ಅನಾವಶ್ಯಕ. ಈ ವಿಚಾರದಲ್ಲಿ ನಮ್ಮ ಸರಕಾರಕ್ಕೆ ಬದ್ಧತೆಯಿದೆ. ನ್ಯಾ. ನಾಗಮೋಹನ್ ದಾಸ್ ಸಮಿತಿಯು ವರದಿ ನೀಡಿದ ತಕ್ಷಣ ಅದನ್ನು ಮುಖ್ಯಮಂತ್ರಿ ಅನುಷ್ಠಾನ ಮಾಡಲಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳಮೀಸಲಾತಿ ಜಾರಿ ಮಾಡುವುದಾಗಿ ನಾವು ಮಾತು ಕೊಟ್ಟಿದ್ದು, ನಮ್ಮ ಸರಕಾರ ನುಡಿದಂತೆ ನಡೆಯುತ್ತದೆ. ಎಲ್ಲ ಸಚಿವರು ಸರ್ವಾನುಮತದಿಂದ ಸಮೀಕ್ಷೆಯ ಕಾರ್ಯವನ್ನು ಒಪ್ಪಿದ್ದು, ಅದರಂತೆಯೆ ಪರಿಶಿಷ್ಟ ಜಾತಿಯ 101 ಉಪ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಯಾವುದೆ ತಾರತಮ್ಯವಿಲ್ಲದೆ ಮೀಸಲಾತಿ ಅನುಷ್ಠಾನವಾಗಲಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯು ರಾಜ್ಯದಲ್ಲಿ ಶೇ.97ರಷ್ಟು ನಡೆದಿದೆ. 30 ವರ್ಷಗಳ ಹೋರಾಟದ ಫಲ ಕೆಲವೆ ದಿನಗಳಲ್ಲಿ ಸಿಗಲಿದೆ. ಈ ಒಳ ಮೀಸಲಾತಿಗಾಗಿ ಹೋರಾಟ ಮಾಡಿದ ಎಲ್ಲರಿಗೂ ಕೆಲವೆ ದಿನಗಳಲ್ಲಿ ಸಂತಸದ ಸುದ್ದಿ ಸಿಗಲಿದೆ. 101 ಜಾತಿಗಳಲ್ಲಿ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲಾಗುವುದು ಎಂದು ಮುನಿಯಪ್ಪ ಹೇಳಿದರು.

ಮತದಾರರ ಹಕ್ಕು ಕಸಿಯುವುದು ಸಂವಿಧಾನ ಬಾಹಿರ: ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ.5ರಂದು ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸುತ್ತಿದ್ದು ಮತದಾನದಲ್ಲಿ ನಡೆದ ಅಕ್ರಮದ ವಿರುದ್ಧ ಮಾತನಾಡಲಿದ್ದಾರೆ. ಮತದಾರರ ಹಕ್ಕನ್ನು ಕಸಿಯುವುದು ಸಂವಿಧಾನ ಬಾಹಿರ. ಮತದಾನದ ಹಕ್ಕನ್ನು ಕಸಿದಿರುವುದಕ್ಕೆ ಸೂಕ್ತ ದಾಖಲೆ ಇರುವುದರಿಂದ ರಾಹುಲ್ ಗಾಂಧಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದರು.

ಆ.2ರಂದು ಪರಮೇಶ್ವರ್ ನಿವಾಸದಲ್ಲಿ ಸಭೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆ.2ರಂದು ತಮ್ಮ ಮನೆಯಲ್ಲಿ ಸಭೆ ನಡೆಸಲಿದ್ದು, ನನಗೂ ಆಹ್ವಾನ ನೀಡಿದ್ದಾರೆ. ಆ ಸಭೆಯಲ್ಲಿ ನಾನು ಭಾಗವಹಿಸುತ್ತೇನೆ. ಯಾವ ವಿಚಾರವಾಗಿ ಸಭೆ ನಡೆಸಲಿದ್ದಾರೆ ಅನ್ನೋದು ಗೊತ್ತಿಲ್ಲ. ಒಳ ಮೀಸಲಾತಿ ವಿಚಾರ ಇದ್ದರೂ ತಪ್ಪೇನು? ಅದನ್ನು ಚರ್ಚಿಸೋಣ ಎಂದು ಮುನಿಯಪ್ಪ ಹೇಳಿದರು.

ನಮ್ಮ ಸರಕಾರ ಜನಪರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಉತ್ತಮವಾದ ಆಡಳಿತವನ್ನು ನೀಡುತ್ತಿದ್ದು, ನಮ್ಮ ಪಕ್ಷ ಜನರಿಗೆ ಮಾತು ಕೊಟ್ಟಂತೆ ಒಳಮೀಸಲಾತಿ ಅನುಷ್ಠಾನ ಮಾಡಲಿದೆ. ಇದರಲ್ಲಿ ಯಾವುದೆ ಅನುಮಾನ ಬೇಡ ಎಂದು ಅವರು ತಿಳಿಸಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News