×
Ad

ಬಡ ವಿದ್ಯಾರ್ಥಿಗಳ ಶೈಕ್ಷಣಿಕ, ತಾಂತ್ರಿಕ ಕೌಶಲ್ಯ ಸುಧಾರಣೆ ನಮ್ಮ ಉದ್ದೇಶ : ಜಿ.ಎ.ಬಾವಾ

Update: 2025-08-01 00:32 IST

ಬೆಂಗಳೂರು : ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಸುಧಾರಿಸುವುದು, ಬಡವರಿಗೆ ವೈದ್ಯಕೀಯ ನೆರವು ನೀಡುವುದು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವುದು ಹಜರತ್ ಹಮೀದ್ ಶಾ ಮತ್ತು ಹಜರತ್ ಮುಹಿಬ್ ಶಾ ದರ್ಗಾ ಸಮಿತಿಯ ಮುಖ್ಯ ಉದ್ದೇಶವಾಗಿದೆ ಎಂದು ಸಮಿತಿಯ ಆಡಳಿತಾಧಿಕಾರಿ ಜಿ.ಎ.ಬಾವಾ ತಿಳಿಸಿದ್ದಾರೆ.

ಗುರುವಾರ ನಗರದ ಕಬ್ಬನ್ ಪೇಟೆಯ ಎಚ್‍ಎಚ್‍ಎಸ್ ಮತ್ತು ಎಚ್‍ಎಂಎಸ್ ಕಾಲೇಜಿನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಜರತ್ ಹಮೀದ್ ಶಾ(ಎಚ್‍ಎಚ್‍ಎಸ್) ಮತ್ತು ಹಜರತ್ ಮುಹಿಬ್ ಶಾ(ಎಚ್‍ಎಂಎಸ್) ದರ್ಗಾ ಸಮಿತಿಯು ಕರ್ನಾಟಕ ವಕ್ಫ್‌ ಮಂಡಳಿಯ ಅಂಗಸಂಸ್ಥೆಯಾಗಿದೆ. ಸಮಿತಿಯು ಕಬ್ಬನ್‍ಪೇಟೆಯಲ್ಲಿ ಎಚ್‍ಎಂಎಸ್ ಕಾಂಪ್ಲೆಂಕ್ಸ್ ಮತ್ತು ಇತರೆ ಸ್ವತ್ತುಗಳ ವ್ಯವಹಾರ ನಿರ್ವಹಿಸುತ್ತದೆ. ಸಮಾಜದ ಸುಧಾರಣೆಗಾಗಿ, ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ದುಡಿಯುವುದು ನಮ್ಮ ಸಮಿತಿಯ ಉದ್ದೇಶವಾಗಿದೆ ಎಂದರು.

ಕಬ್ಬನ್ ಪೇಟೆಯಲ್ಲಿರುವ ಎಚ್‍ಎಚ್‍ಎಸ್ ಮತ್ತು ಎಚ್‍ಎಂಎಸ್ ಐಟಿಐ ಕಾಲೇಜಿನಲ್ಲಿ ವರ್ಷಕ್ಕೆ ಸುಮಾರು 200 ವಿದ್ಯಾರ್ಥಿಗಳಿಗೆ ಎ.ಸಿ. ತಂತ್ರಜ್ಞಾನ, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್, ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ವೆಲ್ಡಿಂಗ್ ತಂತ್ರಜ್ಞಾನದಂತಹ ವಿವಿಧ ತಾಂತ್ರಿಕ ಕೌಶಲ್ಯಗಳಲ್ಲಿ ಶಿಕ್ಷಣವನ್ನು ನೀಡಲಾಗುತ್ತದೆ. ಅಲ್ಲದೆ, ಉದ್ಯೋಗ ಮೇಳಗಳನ್ನು ನಡೆಸಲಾಗುತ್ತದೆ ಎಂದು ಅವರು ಹೇಳಿದರು.

ಎಚ್‍ಎಚ್‍ಎಸ್ ಮತ್ತು ಎಚ್‍ಎಂಎಸ್ ಸಮಿತಿಯು ಅತ್ಯುನ್ನತ ಸಾಧನಗಳುಳ್ಳ ಡಯಾಲಿಸಿಸ್ ಘಟಕವನ್ನು ಸ್ಥಾಪಿಸಿದ್ದು, ಇದು ದಿನಕ್ಕೆ ಸುಮಾರು 30 ಜನರಿಗೆ ಉಚಿತವಾಗಿ ಡಯಾಲಿಸಿಸ್ ಸೌಲಭ್ಯವನ್ನು ಒದಗಿಸುತ್ತದೆ. ಖಾಸಗಿಯಾಗಿ ಡಯಾಲಿಸಿಸ್ ಚಿಕಿತ್ಸೆಗೆ ತಲಾ 1,500 ರೂ. ವೆಚ್ಚವಾಗುತ್ತದೆ ಎಂದು ಜಿ.ಎ.ಬಾವಾ ಹೇಳಿದರು.

ಸಮಿತಿಯು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಹಯೋಗದೊಂದಿಗೆ ನಗರ ಆರೋಗ್ಯ ಕೇಂದ್ರವನ್ನು ನಡೆಸುತ್ತದೆ, ಉಚಿತ ವೈದ್ಯಕೀಯ ಸಮಾಲೋಚನೆ ಮತ್ತು ಉಚಿತ ಔಷಧವನ್ನು ಒದಗಿಸುತ್ತದೆ. ಸರಾಸರಿ, ಪ್ರತಿದಿನ 150 ರೋಗಿಗಳು ಈ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಜಿ.ಎ.ಬಾವಾ ತಿಳಿಸಿದರು.

ಬೆಂಗಳೂರಿನ ಉತ್ತರ ಜಿಲ್ಲೆಯಲ್ಲಿ ಸಮಿತಿಯ ಐಟಿಐ ಕಾಲೇಜು ಪ್ರಥಮ ಸ್ಥಾನದಲ್ಲಿದೆ, ಇದು ಅತ್ಯುತ್ತಮ ಮೂಲಸೌಕರ್ಯವನ್ನು ಹೊಂದಿದೆ. ಕಲಾ ಪ್ರಯೋಗಾಲಯ ಸೌಲಭ್ಯ, ಗ್ರಂಥಾಲಯ ಮತ್ತು ಅನುಭವ ಅಧ್ಯಾಪಕರು ಇದ್ದಾರೆ. ಕಾಲೇಜಿನ ಪ್ರವೇಶ ವರ್ಷದ ವಾರ್ಷಿಕ ಶುಲ್ಕ ಕೇವಲ 300 ರೂ., 2024ರಲ್ಲಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಅಟಲ್ ಟಿಂಕರಿಂಗ್ ಲ್ಯಾಬ್(ರೊಬೊಟಿಕ್ಸ್ ಲ್ಯಾಬ್)ನಲ್ಲಿ ರಾಜ್ಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ ಎಂದು ಜಿ.ಎ.ಬಾವಾ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಎಚ್‍ಎಚ್‍ಎಸ್ ಮತ್ತು ಎಚ್‍ಎಂಎಸ್ ಐಟಿಐ ಕಾಲೇಜಿನ ಪ್ರಾಂಶುಪಾಲ ನಸೀರ್ ಖಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News