×
Ad

ಪರಿಶಿಷ್ಟರ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಧರಣಿ

Update: 2025-08-01 21:43 IST

ಬೆಂಗಳೂರು : ರಾಜ್ಯ ಸರಕಾರ ಕೂಡಲೇ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಶುಕ್ರವಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಧರಣಿ ನಡೆಸಲಾಯಿತು.

ಶುಕ್ರವಾರ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಏರ್ಪಡಿಸಿದ್ದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಕೂಡಲೇ ಒಳಮೀಸಲಾತಿ ಜಾರಿ ಮಾಡದೆ ಇದ್ದರೆ ರಾಜ್ಯ ಸರಕಾರದ ವಿರುದ್ಧ ಮಾದಿಗರಿಂದ ಅಸಹಕಾರ ಚಳವಳಿ ನಡೆಸಲಾಗುವುದು. ಮಾದಿಗರು ಇನ್ನು ಕಾಯುವುದಿಲ್ಲ. ಓಲೈಕೆಗೆ ಬಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಜನಸಂಖ್ಯೆ ಆಧರಿಸಿ ಮೀಸಲಾತಿ ಕೊಡುವುದಲ್ಲ. ಸುಮಾರು 40 ವರ್ಷಗಳಿಂದ ಆದ ಅನ್ಯಾಯವನ್ನು ಪರಿಗಣಿಸಿ ಒಳ ಮೀಸಲಾತಿ ಕೊಡಬೇಕಿದೆ. ಅನೇಕ ದಶಕಗಳಿಂದ ಆದ ಅನ್ಯಾಯ ಪರಿಗಣಿಸಿ ಹೆಚ್ಚು ಮೀಸಲಾತಿ ಕೊಡದೇ ಇದ್ದರೆ ರಾಜ್ಯದ ಮಾದಿಗರು ಹೋರಾಟಕ್ಕೆ ಸನ್ನದ್ಧರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಮಾದಿಗರ ಮತ ಪಡೆದು ವಿಧಾನಸೌಧದ ಮೆಟ್ಟಿಲೇರಿದವರಿಗೆ ನಾಲಿಗೆ ಬಿದ್ದು ಹೋಗಿದೆ. ಮಾದಿಗರ ಪರವಾಗಿ ಮಾತನಾಡದ ನೀವು ಯಾವ ಯೋಗ್ಯತೆ ಇಟ್ಟುಕೊಂಡು ಮತ ಕೇಳುತ್ತೀರಿ? ಜಿಲ್ಲಾ ಪಂಚಾಯತ್ ಮತ್ತಿತರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ನಾಳೆ, ನಾಳೆ ಮೀಸಲಾತಿ ಎನ್ನುತ್ತಾರೆ. ಸಂವಿಧಾನಕ್ಕೆ ಬೀಗ ಹಾಕಿ ತುರ್ತು ಪರಿಸ್ಥಿತಿ ಘೋಷಿಸಿ ಪ್ರಧಾನಿಯಾಗಿ ಮುಂದುವರಿಯಲು ನಿಮಗೆ ಅಧಿಕಾರ ಇತ್ತು. ಈ ರಾಜ್ಯದ, ದೇಶದ ಶೋಷಿತ ವರ್ಗದ ಅಸ್ಪೃಶ್ಯತೆ ಮಾದಿಗರಿಗೆ ಸ್ವಾತಂತ್ರ್ಯದ ನಂತರ ನಿರಂತರ ಅನ್ಯಾಯವಾಗಿದೆ. ಅನೇಕ ಮಾದಿಗರ ಮಕ್ಕಳು ಹಣವಿಲ್ಲದೇ ಎಂಬಿಬಿಎಸ್ ಮಾಡಲಾಗುತ್ತಿಲ್ಲ ಎಂದು ಆರೋಪಿಸಿದರು.

ಎಲ್ಲರಿಗೂ ನ್ಯಾಯ ಕೊಡುವುದಾಗಿ ಹೇಳುವ ಸಮಾಜವಾದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದರ ಚಾಂಪಿಯನ್. ಎಲ್ಲ ರಂಗಗಳಲ್ಲೂ ಹಿಂದುಳಿದ, ಮಾದಿಗರಿಗೆ ಒಂದೇ ಒಂದು ಯೋಜನೆ ನೀಡಿಲ್ಲ. ಮಾದಿಗರು ಎಲ್ಲ ಕಡೆ ಹಿಂದುಳಿದಿದ್ದಾರೆ. ಎಲ್ಲಿ ಹೋಗಿದೆ ನಿಮ್ಮ ಸಮಾಜವಾದ ಎಂದು ಪ್ರಶ್ನೆ ಮಾಡಿದರು.

ಧರಣಿಯಲ್ಲಿ ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ರಾಜ್ಯ ವಕ್ತಾರ ಎಚ್.ವೆಂಕಟೇಶ್ ದೊಡ್ಡೇರಿ ಮತ್ತು ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News