ಸುಳ್ಳು ಸುದ್ದಿ, ದ್ವೇಷ ಭಾಷಣ ತಡೆ ಮಸೂದೆ ಜಾರಿ ವಿಚಾರ | ಸಮಗ್ರ ಚರ್ಚೆಯಾಗಲಿ : ಶಿವಸುಂದರ್
ಬೆಂಗಳೂರು: ‘ಕರ್ನಾಟಕ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ ನಿಷೇಧ ಹಾಗೂ ದ್ವೇಷ ಭಾಷಣ, ದ್ವೇಷ ಅಪರಾಧಗಳ ತಡೆ ಮಸೂದೆ’ಯ ಕರಡನ್ನು ಹಿಂಪಡೆಯಬೇಕು. ಸಾರ್ವಜನಿಕರೊಂದಿಗೆ ಸಮಗ್ರವಾಗಿ ಚರ್ಚೆ ನಡೆಸದೇ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಅಂಕಣಕಾರ ಶಿವಸುಂದರ್ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್- ಕರ್ನಾಟಕದ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ದ್ವೇಷ ಭಾಷಣ ಮತ್ತು ಸುಳ್ಳು ಸುದ್ದಿಯನ್ನು ತಡೆಯಲು ಹೊಸ ಕಾಯ್ದೆಯನ್ನು ಜಾರಿಗೊಳಿಸುವ ಅಗತ್ಯವಿಲ್ಲ. ಇತ್ತೀಚೆಗೆ ಎಲ್ಲ ಬಲವಂತದ ಕ್ರಮ ತೆಗೆದುಕೊಳ್ಳಬೇಡಿ ಎನ್ನುವುದು ಹೆಚ್ಚಾಗುತ್ತಿದೆ. ಬಾಂಬೆ ಹೈಕೋರ್ಟ್ ನ್ಯಾಯಾಧೀಶರು ಪ್ರತಿಯೊಬ್ಬ ಸ್ಲಂ ನಿವಾಸಿ ಸಂಭವನೀಯ ಅಪರಾಧಿ ಎಂದು ಹೇಳಿದ್ದರು. ನಾವೇನಾದರೂ ಪ್ರತಿಯೊಬ್ಬ ರಾಜಕಾರಣಿ ಸಂಭವನೀಯ ಅಪರಾಧಿ ಎಂದು ಹೇಳಿದರೆ ಜೈಲಿಗೆ ಹಾಕುತ್ತಾರೆ ಎಂದು ಶಿವಸುಂದರ್ ಆಕ್ರೋಶ ವ್ಯಕ್ತಪಡಿಸಿದರು.
ವಕೀಲ ವಿನಯ್ ಶ್ರೀನಿವಾಸ್ ಮಾತನಾಡಿ, ಸುಳ್ಳು ಸುದ್ದಿ ಮತ್ತು ಧ್ವೇಷ ಭಾಷಣಗಳ ಸಮಸ್ಯೆ ಗಂಭೀರವಾಗಿದೆ. ಅದರ ವಿರುದ್ಧ ಅಗತ್ಯ ಕ್ರಮವಹಿಸಬೇಕು. ಆದರೆ ಹೊಸ ಕಾನೂನು ಅಗತ್ಯವಿಲ್ಲ ಅಥವಾ ಕಾನೂನು ಬೇಕಾಗಿದ್ದರೆ ಯಾವ ರೀತಿಯಲ್ಲಿ ಇರಬೇಕಿತ್ತು ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ. ಸುಳ್ಳು ಸುದ್ದಿಗಳನ್ನು ತಡೆಯಲು ಸರಕಾರ ಯುವಜನರಲ್ಲಿ ಜಾಗೃತಿ ಮೂಡಿಸಬೇಕು. ಜತೆಗೆ ಸಾಮಾಜಿಕ ಜಾಲತಾಣಗಳಾದ ಎಕ್ಸ್, ಫೇಸ್‌ಬುಕ್, ಯೂಟ್ಯೂಬ್‌ಗಳ ಜವಾಬ್ದಾರಿ ಏನು? ಅವುಗಳ ಜತೆಗೆ ಸರಕಾರ ಚರ್ಚೆ ಮಾಡಿದೆಯೇ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಪತ್ರಕರ್ತ ಹರ್ಷಕುಮಾರ್ ಕುಗ್ವೆ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಲ್ಗಾಮಿ, ವಕೀಲೆ ಮಾನವಿ, ಎಸ್‌ಐಒ ರಾಜ್ಯಾಧ್ಯಕ್ಷ ಆದಿ ಅಲ್ ಹಸನ್, ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಪೀರ್ ಲಟಗೇರಿ ಮತ್ತಿತರರು ಹಾಜರಿದ್ದರು.