ಬೆಂಗಳೂರು | ರಾಷ್ಟ್ರೀಯ ಭಾವೈಕ್ಯಕ್ಕೆ ಧಕ್ಕೆ ತರುವ ಪೋಸ್ಟ್ ಆರೋಪ; ಬಾಲಕ ಸಹಿತ ಇಬ್ಬರ ಬಂಧನ
ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ರಾಷ್ಟ್ರೀಯ ಭಾವೈಕ್ಯಕ್ಕೆ ಧಕ್ಕೆ ತರುವ ರೀತಿ ಪೋಸ್ಟ್ ಮಾಡಿದ ಆರೋಪದಡಿ ಓರ್ವ ಅಪ್ರಾಪ್ತ ಸಹಿತ ಇಬ್ಬರನ್ನು ಕೆಜಿಎಫ್‌ನ ಕ್ಯಾಸಂಬಳ್ಳಿ ಠಾಣೆಯ ಪೊಲೀಸ್ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ.
ನಿಷೇಧಿತ ಉಗ್ರ ಸಂಘಟನೆಗಳಿಂದ ಪ್ರಚೋದನೆಗೊಂಡು ರಾಷ್ಟ್ರೀಯ ಭಾವೈಕತೆಗೆ ಧಕ್ಕೆ, ಧಾರ್ಮಿಕ ಸಾಮರಸ್ಯ ಕದಡಲು ಯತ್ನಿಸಲು ಸಾಮಾಜಿಕ ಜಾಲತಾಣಗಳಲ್ಲಿ ಮೂಲಭೂತವಾದಿಯಾಗಿ ಕೆಲಸ ಮಾಡುತ್ತಿದ್ದ ಆರೋಪದಡಿ ಕೆಜಿಎಫ್‌ನ 15 ವರ್ಷದ ಬಾಲಕ ಹಾಗೂ ಈತನಿಗೆ ನೆರವು ನೀಡಿದ ಆರೋಪದಡಿ ಎ.ಡಿ.ಶಹನಾಜ್ ಯಾನೆ ಸುಹೈಲ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಂಧ್ರಪ್ರದೇಶ ಮೂಲದ ಈ ಬಾಲಕ ಬಳಸುತ್ತಿದ್ದ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದ್ದು, ಪರಿಶೀಲನೆ ವೇಳೆ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಹಾಗೂ ಎಕ್ಸ್‌ನಲ್ಲಿ ಸಕ್ರಿಯನಾಗಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಬಂಧಿತರ ವಿರುದ್ಧ ಕೆಜಿಎಫ್‌ನ ಕ್ಯಾಸಂಬಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಬೇಸಡ್ ಖಲೀಪ್, ಬೇಸಡ್ ಖಲೀಪ್-72 ಹಾಗೂ ಮತ್ತೊಂದು ಮೊಬೈಲ್‌ನಲ್ಲಿ ಖಾಲೀಪ್ ರಿರ್ಟನ್ಸ್ ಹೆಸರಿನಲ್ಲಿ ಈ ಬಾಲಕ ಇನ್‌ಸ್ಟಾಗ್ರಾಮ್ ಪೇಜ್ ತೆರೆದಿದ್ದ. ಅದರಲ್ಲಿ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆಯುಂಟಾಗುವ ರೀತಿಯಲ್ಲಿ ಪೋಸ್ಟ್ ಹಾಕುತ್ತಿದ್ದ ಎಂದು ತಿಳಿದುಬಂದಿದೆ. ಬಾಲಕನಿಗೆ ನೆರವು ನೀಡುತ್ತಿದ್ದ ಆರೋಪದಡಿ ಎ.ಡಿ.ಶಹನಾಜ್ ಎಂಬಾತ ಬಂಧಿತನಾಗಿದ್ದಾನೆ. ಬಂಧಿತ ಮೂಲತಃ ಬಿಹಾರದ ಮುಝಾಫರ್ ಜಿಲ್ಲೆಯವನಾಗಿದ್ದಾನೆ ಎನ್ನಲಾಗಿದೆ