ಪ್ರಭುತ್ವದ ಭಾಷೆ ಜನ ಭಾಷೆಯಾಗಿ ಬದಲಾಗುವುದರ ಹಿಂದೆ ಸೈದ್ಧಾಂತಿಕ ಸಂಘರ್ಷಗಳಿವೆ: ಬಿಳಿಮಲೆ
ಬೆಂಗಳೂರು : ಆಡಳಿತಕ್ಕೆ ಇಂಗ್ಲಿಷ್ ಪದಗಳ ಬದಲಿಗೆ ಸಂಸ್ಕೃತ ಪದಗಳು ಬರುವುದು ಸರಕಾರದ ನೀತಿಯಾಗಿದೆ. ಇದು ಆಕಸ್ಮಿಕವಲ್ಲ. ಪ್ರಭುತ್ವದ ಭಾಷೆ ಮರು ಸ್ಥಾಪನೆ ಆಯಿತೇ ವಿನಃ ಜನ ಭಾಷೆಯಾಗಿ ಬದಲಾಗಲಿಲ್ಲ. ಪ್ರಭುತ್ವದ ಭಾಷೆ ಜನ ಭಾಷೆಯಾಗಿ ಬದಲಾಗುವುದರ ಹಿಂದೆ ಸೈದ್ಧಾಂತಿಕ ಸಂಘರ್ಷಗಳೇ ಇವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಶನಿವಾರ ನಗರದ ಚನ್ನಬಸಪ್ಪ ಸಭಾಂಗಣದಲ್ಲಿ ಸಂಚಲನ ಪ್ರಕಾಶನ ಹೊರತರುತ್ತಿರುವ ಡಾ.ವಿದ್ಯಾಕುಮಾರಿ ಅವರ ‘ಕನ್ನಡದಲ್ಲಿ ಆಡಳಿತ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವು ವಿಶಿಷ್ಟ ಸಂದರ್ಭದಲ್ಲಿ ಇಂಗ್ಲಿಷ್ ಪದಗಳ ಬದಲಾಗಿ ದೇಸಿ ಪದಗಳು ಬೇಕಾದರೆ ಸಂಸ್ಕೃತದಲ್ಲಿ ತೆಗೆದುಕೊಳ್ಳಿ ಎಂದು ಎನ್‌ಇಪಿಯ ಕರಡುನಲ್ಲಿ ಹೇಳಲಾಗಿದೆ ಎಂದು ತಿಳಿಸಿದರು.
ಹಲವರಿಗೆ ಆಡಳಿತದಲ್ಲಿರುವಾಗ ಕನ್ನಡದಲ್ಲಿ ಬರೆಯುವ ಆಸೆ ಇದ್ದರೂ ಬರೆಯುವುದಕ್ಕೆ ಆಗುವುದಿಲ್ಲ. ಯಾಕೆಂದರೆ ಕರ್ನಾಟಕದ ನೆಲದಿಂದ ಉತ್ಪತ್ತಿಯಾದ ಆಡಳಿತ ಪದಗಳು ಇಲ್ಲದೇ ಇರುವುದು. ವಸಾಹತು ಆಡಳಿತದ ಪದಗಳನ್ನು ಹಾಗೆಯೇ ಉಳಿಸಿ ಕೊಂಡಿರುವುದರಿಂದ ಆ ವ್ಯವಸ್ಥೆ ಮುಂದುವರಿದು ಬಂದಿದೆ. ಆದುದರಿಂದಲೇ ದೇಸಿ ಪದಗಳನ್ನು ಜೋಡಿಸುವ ಕೆಲಸ ಮಾಡುವಾಗ ಸಹಜವಾಗಿ ಕೆಲವು ಬಿಕ್ಕಟ್ಟುಗಳು ಬರುವುದು ಎಂದು ಅವರು ತಿಳಿಸಿದರು.
ಪರಿಭಾಷಾ, ವಾಕ್ಯಗಳ ಕೊರತೆ, ಅನುವಾದದ ಕೊರತೆಗಳನ್ನು ಕನ್ನಡದಲ್ಲಿ ಯೋಚನೆ ಮಾಡಿ ಕನ್ನಡಿಗರಿಗೆ ಕನ್ನಡದಲ್ಲಿ ಹೇಳಿದಾಗ ಆಡಳಿತ ಸಮೃದ್ಧಗೊಳ್ಳುತ್ತದೆ ಮತ್ತು ಜನಗಳ ಬದುಕು ಸರಿಯಾಗುತ್ತದೆ. ಭಾಷೆ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿ ಇದರ ವಿರದ್ಧ ಎದೆತಟ್ಟಿ ನಿಲ್ಲುವುದಕ್ಕೆ ಬೇಕಾದಂತೆ ಒಳ್ಳೆಯ ಸೂಚನೆಗಳನ್ನು ಲೇಖಕಿ ವಿದ್ಯಾಕುಮಾರಿ ಕೃತಿಯಲ್ಲಿ ತಿಳಿಸಿದ್ದಾರೆ ಎಂದು ಪುರುಷೋತ್ತಮ ಬಿಳಿಮಳೆ ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಸಂಶೋಧನಾ ಕೇಂದ್ರದ ಡಾ.ಚಲಪತಿ, ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಡೊಮಿನಿಕ್, ಸಿ.ಜಿ.ಲಕ್ಷ್ಮೀಪತಿ, ಇತರರು ಭಾಗವಹಿಸಿದ್ದರು.