ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಿಲ್ಲ: ಕೆಪಿಎಸ್ಸಿ
ಬೆಂಗಳೂರು : ಇತ್ತೀಚೆಗೆ ಪ್ರಕಟಿಸಿರುವ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಯಾವುದೇ ರೀತಿ ಅನ್ಯಾಯವಾಗಿರುವುದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗವು(ಕೆಪಿಎಸ್‍ಸಿ) ಸ್ಪಷ್ಟಪಡಿಸಿದೆ.
ಶನಿವಾರ ಆಯೋಗವು ಪ್ರಕಟನೆ ಹೊರಡಿಸಿದ್ದು, 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆ ಎಂದು ಆರೋಪ ಕೇಳಿ ಬಂದಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.
ಆಯೋಗವು ಹಿಂದಿನ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಗಳ ಮಾಹಿತಿಯನ್ನು ಪರಿಶೀಲಿಸಲಾಗಿ 2017-18ರಲ್ಲಿ ಒಟ್ಟು 106 ಹುದ್ದೆಗಳು ಮತ್ತು 2023-24ರಲ್ಲಿ 384 ಹುದ್ದೆಗಳಿದ್ದು, ಇದಕ್ಕೆ ಸಂಬಂಧಿಸಿದಂತೆ ಈ ಹುದ್ದೆಗಳಿಗೆ 2017-18ರಲ್ಲಿ ಅನುಪಾತ 1:20 ಇದ್ದು, 2023-24ರ ಹುದ್ದೆಗಳಿಗೆ ಅನುಪಾತ 1:15 ಇರುತ್ತದೆ ಎಂದು ತಿಳಿಸಿದೆ.
ಗೆಜೆಟೆಡ್ ಪ್ರೊಬೇಷನರ್ಸ್ 2017-18ರಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಯನ್ನು ತೆಗೆದುಕೊಂಡು ಅರ್ಹರಾಗಿದ್ದವರ ಸಂಖ್ಯೆಗೆ ಹೋಲಿಸಿದಲ್ಲಿ 2023-24ರಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಆಯ್ಕೆ ಅನುಪಾತವು ಶೇ.6.50ರಷ್ಟು ಹೆಚ್ಚಳವಾಗಿರುವುದು ಕಂಡು ಬಂದಿರುತ್ತದೆ. ಆದುದರಿಂದ ಆರೋಪವು ಸತ್ಯಕ್ಕೆ ದೂರವಾಗಿದ್ದು, ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಿಲ್ಲ ಎಂದು ಹೇಳಿದೆ.