ಪ್ರಿಯಾಂಕ್ ಖರ್ಗೆ

ಬೆಂಗಳೂರು : ಎನ್‍ಟಿಟಿ ಡೇಟಾ ಸಂಸ್ಥೆಯು ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಮತ್ತು ಕಾರ್ಯಾಚರಣೆಗಳನ್ನು ಬಲಪಡಿಸುವ ಯೋಜನೆಗಳನ್ನು ಹಮ್ಮಿಕೊಂಡಿದ್ದು, ವಿಶೇಷವಾಗಿ ಮಂಗಳೂರು ಮತ್ತು ಉಡುಪಿಯಲ್ಲಿ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಲಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಎನ್‍ಟಿಟಿ ಡೇಟಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕರ್ನಾಟಕ ಮೂಲದ ನಿವಿಯಸ್ ಸೊಲ್ಯೂಷನ್ಸ್ ಮತ್ತು ವಿನ್‍ವೈರ್ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಂಡಿರುವ ಎನ್‍ಟಿಟಿ ಡೇಟಾ ಸಂಸ್ಥೆಯು ಕರಾವಳಿ ಭಾಗದಲ್ಲಿ ವಿಸ್ತರಣೆಗೆ ಒತ್ತು ನೀಡಲಿದೆ ಎಂದರು.

ಬೆಂಗಳೂರು ಆಚೆಗೆ ಕಾರ್ಯಕ್ರಮದ ಮೂಲಕ ಕೌಶಲ್ಯಾಭಿವೃದ್ಧಿ, ಮೂಲಸೌಕರ್ಯ ಮತ್ತು ಪ್ರಗತಿಪರ ನೀತಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಪ್ರಾದೇಶಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆಗಳನ್ನು ಬಲಪಡಿಸುತ್ತಿದ್ದೇವೆ. ಪ್ರತಿಭೆ ಎಲ್ಲಿದೆಯೋ ಅಲ್ಲಿಗೆ ಹೂಡಿಕೆ ಮತ್ತು ಅವಕಾಶಗಳನ್ನು ಕೊಂಡೊಯ್ಯುವುದು ನಮ್ಮ ಆದ್ಯತೆಯಾಗಿದೆ. ಕರ್ನಾಟಕದ ಉದಯೋನ್ಮುಖ ತಂತ್ರಜ್ಞಾನ ಕೇಂದ್ರಗಳಲ್ಲಿ ಬೆಳವಣಿಗೆಯನ್ನು ವೇಗಗೊಳಿಸುವ ಪರಿಹಾರಗಳನ್ನು ರೂಪಿಸಲು ಉದ್ಯಮ ವಲಯದೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಬಯಸುತ್ತೇವೆ ಎಂದು ಅವರು ಹೇಳಿದರು.

ಸಂಸ್ಥೆಯು ಗಣಕ ಸೇವೆಗಳಾಚೆಗೆ ಜೈವಿಕ ತಂತ್ರಜ್ಞಾನ, ಆರೋಗ್ಯ, ಜೀವ ವಿಜ್ಞಾನ ಮತ್ತು ವಾಹನ ಉತ್ಪಾದನಾ ಕ್ಷೇತ್ರಗಳಲ್ಲಿಯೂ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಬೇಕು. ಈ ಕ್ಷೇತ್ರಗಳಲ್ಲಿ ಸಂಸ್ಥೆಯ ಹೆಚ್ಚುತ್ತಿರುವ ಆಸಕ್ತಿಯು ಕರ್ನಾಟಕದ ಬಲಿಷ್ಠ ಕೈಗಾರಿಕಾ ಮತ್ತು ಸಂಶೋಧನಾ ಪರಿಸರ ವ್ಯವಸ್ಥೆಯೊಂದಿಗೆ ಹೊಂದಾಣಿಕೆಯಾಗಲಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಎನ್‍ಟಿಟಿ ಡೇಟಾ ಸಂಸ್ಥೆಯ ಅಧ್ಯಕ್ಷರಾದ ಚಾರ್ಲಿ, ಮುಖ್ಯ ಬೆಳವಣಿಗೆ ಅಧಿಕಾರಿ ಶಶಿರ್ ಶೆಟ್ಟಿ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor