‘ಹಾಲು-ಬಸ್ ದರ ಏರಿಕೆ’ ಸರಕಾರದ ಕ್ರಮ ಖಂಡನೀಯ : ವೆಲ್ಫೇರ್ ಪಾರ್ಟಿ
ತಾಹೇರ್ ಹುಸೇನ್
ಬೆಂಗಳೂರು : ರಾಜ್ಯ ಸರಕಾರವು ನಂದಿನಿ ಹಾಲಿನ ದರವನ್ನು ಹೆಚ್ಚಿಸಿರುವ ಬೆನ್ನಲ್ಲೇ ಬಸ್ ಪ್ರಯಾಣ ದರವನ್ನೂ ಹೆಚ್ಚಿಸಲು ಮುಂದಾಗಿರುವುದು ಜನಸಾಮಾನ್ಯರ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಆತಂಕ ವ್ಯಕ್ತಪಡಿಸಿದ್ದಾರೆ.
ಸೋಮವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಅಡುಗೆ ಅನಿಲ, ವಿದ್ಯುತ್ ಹಾಗೂ ದಿನನಿತ್ಯದ ಜೀವನಾವಶ್ಯಕ ವಸ್ತುಗಳ ಬೆಲೆಗಳಿಂದ ತತ್ತರಿಸಿರುವ ಜನರಿಗೆ ಹಾಲಿನ ದರ ಏರಿಕೆ ಮತ್ತೊಂದು ಆರ್ಥಿಕ ಹೊರೆಯಾಗಿದೆ ಎಂದು ಹೇಳಿದ್ದಾರೆ.
ಹಾಲು ಪ್ರತಿಯೊಂದು ಕುಟುಂಬದ ದೈನಂದಿನ ಅಗತ್ಯವಾಗಿದ್ದು, ಅದರ ಬೆಲೆ ಏರಿಕೆಯ ಪರಿಣಾಮ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ನೇರವಾಗಿ ಬೀಳಲಿದೆ. ಮಕ್ಕಳ ಪೌಷ್ಟಿಕ ಆಹಾರದಿಂದ ಹಿಡಿದು ಚಹಾ ಅಂಗಡಿಗಳು, ಸಣ್ಣ ಹೋಟೆಲ್‍ಗಳು ಹಾಗೂ ಹಾಲಿನ ಉತ್ಪನ್ನಗಳ ಉದ್ಯಮದವರೆಗೂ ಇದರ ಪರಿಣಾಮ ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಅದೆ ರೀತಿ ಸಾರಿಗೆ ಸಚಿವರು ಬಸ್ ಪ್ರಯಾಣ ದರ ಹೆಚ್ಚಿಸುವ ಬಗ್ಗೆ ಹೇಳಿಕೆ ನೀಡಿರುವುದು ಕೂಡ ಆತಂಕದ ವಿಷಯ. ಪುರುಷ ಪ್ರಯಾಣಿಕರು, ದಿನಗೂಲಿ ಕಾರ್ಮಿಕರು, ಖಾಸಗಿ ಉದ್ಯೋಗಿಗಳು, ಸಣ್ಣ ವ್ಯಾಪಾರಿಗಳು ಹಾಗೂ ಇತರ ಪ್ರಯಾಣಿಕರು ಬಸ್ ಪ್ರಯಾಣ ದರ ಹೆಚ್ಚಳದ ಹೊರೆಯನ್ನು ಎದುರಿಸಬೇಕಾಗುತ್ತದೆ ಎಂದು ತಾಹೇರ್ ಹುಸೇನ್ ಹೇಳಿದ್ದಾರೆ.
ಅದರಲ್ಲೂ ಪ್ರತಿದಿನ ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಕೆಳಮಧ್ಯಮ ವರ್ಗದ ಜನರಿಗೆ ದರ ಏರಿಕೆ ಹೆಚ್ಚುವರಿ ಹೊರೆಯಾಗಲಿದೆ. ಸಾರಿಗೆ ಸಂಸ್ಥೆಗಳ ಆರ್ಥಿಕ ನಿರ್ವಹಣೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ಪ್ರಯಾಣಿಕರ ಮೇಲೆ ವರ್ಗಾಯಿಸುವುದು ಸೂಕ್ತವಲ್ಲ. ಸರಕಾರವು ಸಾರಿಗೆ ಸಂಸ್ಥೆಗಳಿಗೆ ಅಗತ್ಯ ಅನುದಾನ ಒದಗಿಸಿ, ದರ ಏರಿಕೆಯ ಪ್ರಸ್ತಾವನೆಯನ್ನು ಮರುಪರಿಶೀಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಇನ್ನೊಂದೆಡೆ, ರಾಜ್ಯದ ಕಬ್ಬು ಬೆಳೆಗಾರರು ತಮ್ಮ ಉತ್ಪನ್ನಗಳಿಗೆ ಸೂಕ್ತ ಮತ್ತು ನ್ಯಾಯಯುತ ಬೆಲೆ ದೊರೆಯದೆ ಸಂಕಷ್ಟ ಎದುರಿಸುತ್ತಿದ್ದಾರೆ. ಕಬ್ಬು ಕಟಾವು, ಸಾಗಣೆ ವೆಚ್ಚ ಹಾಗೂ ಉತ್ಪಾದನಾ ವೆಚ್ಚಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ರೈತರಿಗೆ ಲಾಭದಾಯಕ ಬೆಲೆ ದೊರೆಯುವುದು ಅತ್ಯಗತ್ಯ. ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಾದ ಬಾಕಿ ಹಣವನ್ನು ವಿಳಂಬವಿಲ್ಲದೆ ಪಾವತಿಸುವಂತೆ ಸರಕಾರ ಕ್ರಮ ಕೈಗೊಳ್ಳಬೇಕು. ರೈತರ ಉತ್ಪಾದನಾ ವೆಚ್ಚ ಮತ್ತು ಅವರ ಶ್ರಮಕ್ಕೆ ತಕ್ಕಂತೆ ನ್ಯಾಯಯುತ ಬೆಲೆ ನಿಗದಿಪಡಿಸಿ, ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ತಾಹೇರ್ ಹುಸೇನ್ ಆಗ್ರಹಿಸಿದ್ದಾರೆ.
ಅದೇ ರೀತಿ, ರಾಜ್ಯದ ವಿವಿಧ ಭಾಗಗಳಲ್ಲಿ ಬರ ಪರಿಸ್ಥಿತಿಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಬೆಳೆ ನಷ್ಟ, ನೀರಿನ ಕೊರತೆ, ಜಾನುವಾರುಗಳ ಮೇವಿನ ಸಮಸ್ಯೆ ಮತ್ತು ಕೃಷಿ ಸಾಲದ ಹೊರೆ ರೈತರನ್ನು ಕಾಡುತ್ತಿದೆ. ಬರಪೀಡಿತ ಪ್ರದೇಶಗಳ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡದೆ ತಕ್ಷಣ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ಗ್ರಾಮೀಣ ಜನರ ಬದುಕಿಗೆ ಆಸರೆಯಾಗಬೇಕು. ಸರಕಾರವು ಬೆಲೆ ಏರಿಕೆ ಮತ್ತು ಆದಾಯದ ಕುಸಿತದಿಂದ ಸಂಕಷ್ಟದಲ್ಲಿರುವ ಜನರ ಬದುಕಿನ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ರಾಜ್ಯ ಸರಕಾರವು ಹಾಲಿನ ದರ ಏರಿಕೆಯನ್ನು ಮರುಪರಿಶೀಲಿಸಿ, ಬಸ್ ಪ್ರಯಾಣ ದರ ಹೆಚ್ಚಳದ ನಿರ್ಧಾರವನ್ನು ಕೈಬಿಡಬೇಕು. ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಹಾಗೂ ಬಾಕಿ ಹಣವನ್ನು ಖಾತರಿಪಡಿಸುವುದರ ಜೊತೆಗೆ ಬರಪೀಡಿತ ಪ್ರದೇಶಗಳ ರೈತರಿಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ತಾಹೇರ್ ಹುಸೇನ್ ಆಗ್ರಹಿಸಿದ್ದಾರೆ.