×
Ad

‘ಪಾಕ್ ಪರ ಘೋಷಣೆ’ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು: ಉಭಯ ಸದನಗಳಲ್ಲಿ ಗದ್ದಲ-ಧರಣಿ

Update: 2024-02-29 19:39 IST

ಫೈಲ್‌ ಚಿತ್ರ

ಬೆಂಗಳೂರು : ಪಾಕ್ ಪರ ಘೋಷಣೆ ಕೂಗಿದ ಆರೋಪ ಪ್ರಕರಣ ಕುರಿತು ಚರ್ಚೆಗೆ ಪಟ್ಟು ಹಿಡಿದ, ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಸರಕಾರದ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಉಭಯ ಸದನಗಳಲ್ಲಿ ಪ್ರತಿಪಕ್ಷ ಸದಸ್ಯರ ಧರಣಿ, ಗದ್ದಲಕ್ಕೆ ಎರಡನೇ ದಿನದ ಕಲಾಪ ಬಲಿಯಾಯಿತು.

ಗುರುವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಮುಂದುವರಿಸಿ, ಸರಕಾರದ ವಿರುದ್ಧ ಘೋಷಣೆ ಮೊಳಗಿಸಿದ್ದರಿಂದ ಗದ್ದಲ ಸೃಷ್ಟಿಯಾಯಿತು. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲು ಆರಂಭಿಸಿದರು. ಈ ವೇಳೆ ಜೈ ಶ್ರೀರಾಮ್, ಜೈ ಸೀತಾ ರಾಮ್ ಘೋಷಣೆಗಳನ್ನು ಪ್ರತಿಪಕ್ಷ-ಆಡಳಿತ ಪಕ್ಷದ ಸದಸ್ಯರು ಕೂಗಿದ್ದರಿಂದ ಗೊಂದಲ ಸೃಷ್ಟಿಯಾಯಿತು. ಗದ್ದಲದ ಮಧ್ಯೆ ಸಿದ್ದರಾಮಯ್ಯ ಉತ್ತರ ನೀಡುವುದನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಪರಿಷತ್‍ನಲ್ಲಿಯೂ ಇದೇ ವಿಚಾರಕ್ಕೆ ಗದ್ದಲ ಸೃಷ್ಠಿಯಾದ ಹಿನ್ನೆಲೆ ಸಭಾಪತಿ ಕಲಾಪವನ್ನು ಕೆಲಕಾಲ ಮುಂದೂಡಿದರು. ನಂತರದಲ್ಲಿ ಕಲಾಪ ಪ್ರಾರಂಭವಾದ ಮೇಲೆ ಬಿ.ಕೆ.ಹರಿಪ್ರಸಾದ್ ಮಾತನಾಡಿದರು.

ಹಕ್ಕುಚ್ಯುತಿ ಮಂಡಿಸುತ್ತೇನೆ

"ಬುಧವಾರದ ಕಲಾಪದ ವೇಳೆ ನಾನು ಉತ್ತರ ನೀಡುವ ವೇಳೆ ಪಾಕಿಸ್ತಾನ ಬಿಜೆಪಿಗೆ ಶತ್ರು ರಾಷ್ಟ್ರ ಆಗಿರಬಹುದು. ಆದರೆ, ನಮಗೆ ನೆರೆ ರಾಷ್ಟ್ರ ಎಂದು ಹೇಳಿದ್ದೆ, ಅದನ್ನು ಮಾಧ್ಯಮಗಳಲ್ಲಿ ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇದರ ವಿರುದ್ಧ ನಾನು ಹಕ್ಕುಚ್ಯುತಿ ಮಂಡಿಸುತ್ತೇನೆ" ಎಂದು ಹರಿಪ್ರಸಾದ್‌ ಹೇಳಿದರು.

ಈ ವೇಳೆ ಬಿಜೆಪಿ ಸದಸ್ಯ ರವಿಕುಮಾರ್, ಘೋಷಣೆ ಕೂಗಿದವರನ್ನು ಇದುವರೆಗೆ ಬಂಧಿಸಿಲ್ಲ. ಕೇವಲ ಮಾತನಾಡಿ ಕಳಿಸಿದ್ದೇವೆ. ಏಳು ಜನರನ್ನು ವಿಚಾರಿಸಿದ್ದೇವೆಂದು ಗೃಹ ಸಚಿವರು ಹೇಳಿದ್ದಾರೆ. ಇದರಿಂದ ನಾವು ಬಹಳ ಅಸಮಾಧಾನಿತರಾಗಿದ್ದೇವೆ. 36 ತಾಸು ಕಳೆದರೂ ಇದುವರೆಗೆ ಬಂಧಿಸಿಲ್ಲ ಎಂದು ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಬಸವರಾಜ್ ಹೊರಟ್ಟಿ, ಬುಧವಾರದ ಕಲಾಪದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಗೃಹ ಸಚಿವರ ಉತ್ತರದ ವೇಳೆ ಎಷ್ಟು ಸಮಯ ಬೇಕಾದರೂ ಕೊಡುತ್ತೇನೆ. ಈಗ ನೋಟಿಸ್ ಕೊಡಿ, ಆಮೇಲೆ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದರು. ಇದೊಂದು ಗಂಭೀರ ವಿಚಾರ, ಈಗಲೇ ಚರ್ಚೆಗೆ ಅವಕಾಶ ಕೊಡಿ ಎಂದು ವಿಪಕ್ಷ ಸದಸ್ಯರು ಪಟ್ಟು ಮುಂದುವರೆಸಿದರು. ಇದರ ನಡುವೆಯೇ ಪ್ರತಿಪಕ್ಷಗಳ ಬೇಡಿಕೆಯನ್ನು ಪರಿಗಣಿಸದೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡಗೆ ಬಜೆಟ್ ಮೇಲೆ ಮಾತನಾಡಿ ಎಂದು ಸಭಾಪತಿ ಸೂಚಿಸಿದರು.

ಇದಕ್ಕೆ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಚರ್ಚೆಗೆ ಈಗಲೇ ಅವಕಾಶ ಕೊಡಿ ಎಂದು ಸರಕಾರದ ವಿರುದ್ಧ ಘೋಷಣೆ ಕೂಗಿದರು. ನೀವು ಹೀಗೆ ವರ್ತಿಸಿದರೆ ನಾನು ಸದನ ನಡೆಸುವುದು ಹೇಗೆ ಎಂದು ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಕಲಾಪವನ್ನು ಪುನಃ ಕೆಲಕಾಲ ಮುಂದೂಡಿಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News