×
Ad

ರೂಪಾಯಿ ಮೌಲ್ಯ ಕುಸಿತಕ್ಕೆ ಮೋದಿ ಸರಕಾರದ ಆರ್ಥಿಕ ದಿವಾಳಿತನದ ನೀತಿಗಳೇ ಕಾರಣ : ಬಿ‌.ಕೆ.ಹರಿಪ್ರಸಾದ್

Update: 2025-11-24 14:32 IST

PC: PTI | X.com

ಬೆಂಗಳೂರು : ಸ್ವಯಂ ಘೋಷಿತ "ವಿಶ್ವಗುರು"ವಿನ ಆಡಳಿತದಲ್ಲಿ ವಿಶ್ವದ ಎದುರು ಭಾರತದ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿಯುತ್ತಲೇ ಇರುವುದು ಪ್ರಧಾನಿ ನರೇಂದ್ರ ಮೋದಿಯ "ಅಚ್ಛೇ ದಿನ"ದ ಕರಾಳ ಮುಖಗಳ ಅನಾವರಣವೋ ಅಥವಾ ರೂಪಾಯಿ ಮೌಲ್ಯವನ್ನು ಶತಕದ ಗಡಿ ದಾಟಿಸಬೇಕೆಂದು ದಿನದ 18 ಗಂಟೆಗಳ ಕಾಲ ದುಡಿಯುತ್ತಿರುವುದರ ಸಾಧನೆಯೋ? ಎಂದು ಹಿರಿಯ ಕಾಂಗ್ರೆಸ್‌ ನಾಯಕ ಬಿ‌.ಕೆ ಹರಿಪ್ರಸಾದ್ ಅವರು ಕುಹಕವಾಡಿದ್ದಾರೆ.

ಸಾಮಾಜಿಕ ಜಾತಾಣ Xನಲ್ಲಿ ಪೋಸ್ಟ್‌ ಮಾಡಿರುವ ಅವರು, ಮೋದಿ ಸರಕಾರದ ಕೆಟ್ಟ ಆರ್ಥಿಕ ನೀತಿಯಿಂದಾಗಿ ಡಾಲರ್‌ ಮುಂದೆ ರುಪಾಯಿ ಮೌಲ್ಯ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದ್ದರೆ, ದೇಶದ ಆಡಳಿತ, ಆರ್ಥಿಕ ನೀತಿಗಳು ಹಳಿ ತಪ್ಪಿರುವುದರಿಂದ ಬೆಲೆ ಏರಿಕೆಯೂ ಮಿತಿ ಮೀರುತ್ತಿದೆ. ಪೆಟ್ರೋಲ್‌, ಡಿಸೆಲ್‌, ದಿನಬಳಕೆಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದ್ದರೆ, ಜನ ಸಾಮಾನ್ಯರ ಬದುಕು ಮತ್ತಷ್ಟು ಹದಗೆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುಪಿಎ ಆಡಳಿತದಲ್ಲಿ ರೂಪಾಯಿ ಮೌಲ್ಯ 63.76 ಇದ್ದ ಕಾಲದಲ್ಲಿ 2013, ಆಗಸ್ಟ್ 24 ರಂದು ಗುಜರಾತಿನ ರಾಜ್ ಕೋಟ್ ನಲ್ಲಿ ನಿಂತು ನರೇಂದ್ರ ಮೋದಿ ಭಾಷಣ ಮಾಡಿರುವುದನ್ನು ಮರೆತಂತಿದೆ. "ರೂಪಾಯಿ ಮೌಲ್ಯ ಡೆತ್ ಬೆಡ್ ನಲ್ಲಿದೆ, ಯುಪಿಎ ಸರ್ಕಾರ ರೂಪಾಯಿ ಮೌಲ್ಯ ಕುಸಿಯುವಂತೆ ಮಾಡಿದೆ, ಆರ್ಥಿಕತೆಯನ್ನು ಎದ್ದು ನಿಲ್ಲಿಸಬೇಕಿದೆ" ಎಂದು ಭಾಷಣ ಮಾಡಿದ ಪ್ರಧಾನಿ ಮೋದಿ, ಆರ್ಥಿಕತೆಯನ್ನು ಎದ್ದು ನಿಲ್ಲಿಸುವುದು ಬಿಡಿ, ಮಕಾಡೆ ಮಲಗಿಸಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ರೂಪಾಯಿ ಮೌಲ್ಯವು 89ರ ಗಡಿ ದಾಟಿರುವುದಕ್ಕೆ ಪ್ರಧಾನಿ ಮೋದಿ ಸರ್ಕಾರದ ಆರ್ಥಿಕ ದಿವಾಳಿತನದ ನೀತಿಗಳೇ ಕಾರಣ. ರೂಪಾಯಿ ಮೌಲ್ಯದ ಕುಸಿತವು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಅಸ್ಮಿತೆಗೆ ಬಿದ್ದ ಭಾರಿ ಹೊಡೆತ. ಕೇಂದ್ರ ಸರಕಾರದ ಇಂತಹ ಕೆಟ್ಟ ನೀತಿಗಳಿಂದ ಭಾರತದ ಭವಿಷ್ಯತ್ತಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News