ಬಂಡವಾಳ ಹೂಡಿಕೆ ಕುರಿತು ಚರ್ಚೆ; ದಕ್ಷಿಣ ಕೊರಿಯಾ ನಿಯೋಗದೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಸಭೆ
ಬೆಂಗಳೂರು : ದಕ್ಷಿಣ ಕೊರಿಯಾದ ಪ್ರಮುಖ ಉದ್ಯಮ, ಬಂಡವಾಳ ಹೂಡಿಕೆ ಹಾಗೂ ಉದ್ಯಮ ಹೂಡಿಕೆ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ನಿಯೋಗವು ಶನಿವಾರದಂದು ವಿಕಾಸಸೌಧದಲ್ಲಿ ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಕರ್ನಾಟಕದಲ್ಲಿ ಹೂಡಿಕೆ, ಉದ್ಯಮ ವಿಸ್ತರಣೆ, ನವೋದ್ಯಮ ಸಹಕಾರ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿನ ಅವಕಾಶಗಳ ಕುರಿತು ಚರ್ಚಿಸಿತು.
ಕೃತಕ ಬುದ್ಧಿಮತ್ತೆ, ಆಳ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿದ್ಯುನ್ಮಾನ, ಅರೆವಾಹಕ, ವಿಮಾನಯಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ಹವಾಮಾನ ತಂತ್ರಜ್ಞಾನ ಹಾಗೂ ಆಹಾರ ತಂತ್ರಜ್ಞಾನ ಸೇರಿದಂತೆ ವಿವಿಧ ಉದಯೋನ್ಮುಖ ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿರುವ ಹೂಡಿಕೆ ಅವಕಾಶಗಳ ಕುರಿತು ಚರ್ಚಿಸಲಾಯಿತು.
ಮುಂಬರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಹೆಚ್ಚಿನ ಕೊರಿಯಾ ಹೂಡಿಕೆದಾರರು ಹಾಗೂ ನವೋದ್ಯಮಗಳ ಭಾಗವಹಿಸುವಿಕೆ, ವಿಶೇಷ ಅಧಿವೇಶನಗಳು, ಉದ್ಯಮ–ಉದ್ಯಮ ಸಂವಾದಗಳು ಮತ್ತು ತಂತ್ರಜ್ಞಾನ ಪ್ರದರ್ಶನಗಳನ್ನು ಹೆಚ್ಚಿಸುವ ಸಾಧ್ಯತೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ನಿಯೋಗದಲ್ಲಿ ಡಿಎಸ್‍ಸಿ ಇನ್ವೆಸ್ಟ್‍ಮೆಂಟ್, ಜಿಎಸ್ ವೆಂಚರ್ಸ್, ಸಿಜೆ ಇನ್ವೆಸ್ಟ್ ಮೆಂಟ್, ಕ್ಯಾಪ್‍ಸ್ಟೋನ್ ಪಾಟ್ರ್ನರ್ಸ್, ಸಿಜೆ ಚೆಲ್‍ಜೆಡಾಂಗ್ ಹಾಗೂ ಗೋ ಪಿಜ್ಜಾ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳು ಭಾಗವಹಿಸಿದ್ದರು.