×
Ad

ಅಂಗಡಿ ಮಾಲಕನಿಂದ 1.60 ಲಕ್ಷ ರೂ. ವಸೂಲಿ ಆರೋಪ: ಪಿಎಸ್‍ಐ ಅಮಾನತು

Update: 2025-12-17 00:28 IST

ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದ ಜ್ಯೂಸ್ ಹಾಗೂ ಜೆರಾಕ್ಸ್ ಅಂಗಡಿ ಮಾಲಕನಿಂದ 1.60 ಲಕ್ಷ ರೂ ವಸೂಲಿ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ಹರೀಶ್ ಅವರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಸೂಪರಿಂಟೆಂಡೆಂಟ್ ಆಫ್ ಪೊಲಿಸ್(ಎಸ್‍ಪಿ) ಶ್ರೀನಿವಾಸ್ ಗೌಡ ಅವರು ಸೇವೆಯಿಂದ ಅಮಾನತು ಮಾಡಿದ್ದಾರೆ ಎಂದು ವರದಿಯಾಗಿದೆ.

ಅ.29ರಂದು ಅಂದಿನ ಚನ್ನಪಟ್ಟಣ ಟೌನ್ ಪಿಎಸ್‍ಐ ಆಗಿದ್ದ ಹರೀಶ್, ಕನಕಪುರದ ಜ್ಯೂಸ್ ಹಾಗೂ ಜೆರಾಕ್ಸ್ ಅಂಗಡಿ ಮಾಲಕ ರಾಜೇಶ್ ಅವರ ಬಳಿ ಹೋಗಿ ‘ನೀವು ನಕಲಿ ಆಧಾರ್ ಕಾರ್ಡ್ ಮಾಡುತ್ತೀದ್ದೀರಿ’ ಎಂದು ಕನಕಪುರದಿಂದ ಚನ್ನಪಟ್ಟಣ ಠಾಣೆಗೆ ಕರೆದುಕೊಂಡು ಬಂದು, ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ, ಪೆಟ್ರೋಲ್ ಬಂಕ್‍ನಲ್ಲಿ 60 ಸಾವಿರ ರೂ. ಆನ್‍ಲೈನ್ ನಲ್ಲಿ ಮಾಡಿಸಿಕೊಂಡಿದ್ದರು. ಜೊತೆಗೆ ಒಂದು ಲಕ್ಷ ರೂ. ನಗದನ್ನು ರಾಜೇಶ್ ಅವರಿಂದ ಕಸಿದುಕೊಂಡಿದ್ದರು. ಹೀಗಾಗಿ ವಾರದ ಹಿಂದೆ ರಾಜೇಶ್ ಕೇಂದ್ರ ವಲಯ ಐಜಿಪಿ ಅವರಿಗೆ ದೂರು ನೀಡಿದ್ದರು.

ಈ ಬಗ್ಗೆ ತಕ್ಷಣ ಪ್ರಕ್ರಿಯಿಸಿದ ಐಜಿಪಿ ಕಚೇರಿ, ಇದರ ತನಿಖೆ ನಡೆಸಲು ಡಿವೈಎಸ್ಪಿ ಕೆಂಚೇಗೌಡ ಅವರಿಗೆ ವಹಿಸಲಾಗಿತ್ತು. ಈ ಬಗ್ಗೆ ಕೆಂಚೇಗೌಡ ಅವರು ತನಿಖೆಯನ್ನು ನಡೆಸಿ, ವರದಿಯನ್ನು ಕೇಂದ್ರ ವಲಯ ಐಜಿಪಿ ಕಚೇರಿಗೆ ನೀಡಿದ್ದಾರೆ. ತನಿಖೆಯಲ್ಲಿ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದ್ದು, ಎಸ್.ಪಿ. ಶ್ರೀನಿವಾಸ್ ಗೌಡ ಅವರು ಕಗ್ಗಲಿಪುರ ಠಾಣೆಯಲ್ಲಿ ಪಿಎಸ್‍ಪಿ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಅವರನ್ನು ಅಮಾನತು ಮಾಡಿದ್ದಾರೆ.

ತನಿಖೆಯ ವೇಳೆ ಪಿಎಸ್ ಐ ಹರೀಶ್ ಅವರು, ‘ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಹೇಳಿದ್ದಾರೆ. ಇನ್ನು ಅಂಗಡಿ ಮಾಲೀಕ ರಾಜೇಶ್ ಹೇಳಿರುವ ಪ್ರಕಾರ, ‘ನನ್ನ ಮೇಲೆ ಯಾವುದೇ ದೂರು ದಾಖಲಿಸಿಕೊಳ್ಳದೇ, ಮೆಡಿಕಲ್ ಪರೀಕ್ಷೆ ಮಾಡಿಸಿದ್ದಾರೆ’ ಎಂದು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News