×
Ad

ನೀತಿ ಆಯೋಗದ ಸಭೆಗೆ ಸಿಎಂ ಗೈರು | ನಿಮ್ಮಂತರಿಗೆಲ್ಲ ಏಕೆ ರಾಜಕಾರಣ ಸ್ವಾಮಿ: ಆರ್.ಅಶೋಕ್ ಲೇವಡಿ

Update: 2025-05-25 19:02 IST

ಆರ್.ಅಶೋಕ್

ಬೆಂಗಳೂರು : ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರು ಹಾಜರಿಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್, ‘ನಿಮ್ಮಂತಹವರಿಗೆಲ್ಲ ಯಾಕೆ ಸ್ವಾಮಿ ರಾಜಕಾರಣ, ಸಾರ್ವಜನಿಕ ಜೀವನ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ರವಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡಲು ಸಮಯವಿದೆ. ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಐಪಿಎಲ್ ಕ್ರಿಕೆಟ್ ಪಂದ್ಯ ವೀಕ್ಷಿಸಲು ಸಮಯವಿದೆ. ಕುರ್ಚಿಗೆ ಕಂಟಕ ಬಂದಾಗ ಹೈಕಮಾಂಡ್ ಮನೆಬಾಗಿಲು ತಟ್ಟಲು ದೆಹಲಿಗೆ ಹೋಗಲು ಸಮಯವಿದೆ. ಹುಟ್ಟುಹಬ್ಬಕ್ಕೆ ಕಬಿನಿಗೆ ಹೋಗಿ ಆನೆ, ಹುಲಿ ನೀಡಲು ಸಮಯವಿದೆ. ಇಂಡಿಯಾ ಮಿತ್ರ ಪಕ್ಷ ಡಿಎಂಕೆ ಕರೆದಾಗ ಚೆನ್ನೈಗೆ ಹೋಗಿ ರಾಜಕೀಯ ಮಾಡಲು ಸಮಯವಿದೆ. ಎಐಸಿಸಿ ಸಭೆಗೆ ರಾಜಸ್ಥಾನದ ಜೈಪುರಕ್ಕೆ ಹೋಗಲು ಸಮಯವಿದೆ’ ಎಂದು ಟೀಕಿಸಿದ್ದಾರೆ.

‘ಆದರೆ ರಾಜ್ಯದ, ದೇಶದ ಅಭಿವೃದ್ಧಿಗಾಗಿ, ಭವಿಷ್ಯಕ್ಕಾಗಿ ಪ್ರಧಾನಿ ಮೋದಿ ದೇಶದ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚಿಂತನ ಮಂಥನ ನಡೆಸುವ ಅತ್ಯಂತ ಪ್ರಮುಖ ವೇದಿಕೆಯಾದ ನೀತಿ ಆಯೋಗದ ಸಭೆಗೆ ಹೋಗಲು, ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಹೋಗಲು ಇಬ್ಬರಿಗೂ ಪುರುಸೊತ್ತಿಲ್ಲ, ಆಸಕ್ತಿಯೂ ಇಲ್ಲ’ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

‘ಕಾಂಗ್ರೆಸ್ ಪಕ್ಷಕ್ಕೆ ರಾಜಕಾರಣ ಅಂದರೆ ಮೋಜು, ಮಸ್ತಿ ಮಾಡುವ ಅಧಿಕಾರದ ಸುಪ್ಪತ್ತಿಗೆಯೇ ಹೊರತು ಜನಕಲ್ಯಾಣ ಅಥವಾ ಅಭಿವೃದ್ದಿಯ ಬಗ್ಗೆ ಆಸಕ್ತಿಯೂ ಇಲ್ಲ, ಬದ್ಧತೆಯೂ ಇಲ್ಲ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಇದೇ ಸಂದರ್ಭದಲ್ಲಿ ಲೇವಡಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News