ಜಿಎಸ್ಟಿ ಸಮಿತಿ ಸಭೆಗೆ ಹೋಗದೆ ಈಗ ಮನವಿ ಕೊಟ್ಟರೇ ಏನು ಪ್ರಯೋಜನ : ಆರ್.ಅಶೋಕ್
ಬೆಂಗಳೂರು : ‘ಸಲಹೆ-ಸೂಚನೆಗಳನ್ನು ನೀಡಬೇಕಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಮಿತಿ ಸಭೆಗೆ ಹೋಗದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ದಿಲ್ಲಿಗೆ ತೆರಳಿ ಮನವಿ ಸಲ್ಲಿಸಿದರೆ ಏನು ಪ್ರಯೋಜನ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಕೊಟ್ಟು ಬಂದು ನಾಟಕವಾಡುತ್ತಿದ್ದು, ಮನವಿ ಕೊಟ್ಟು ಹೊರಗೆ ಬಂದ ನಂತರ ಕೇಂದ್ರ ಸರಕಾರದಿಂದ ನಮಗೆ ವಂಚನೆಯಾಗಿದೆ ಎಂದು ಆರೋಪ ಮಾಡುವುದು ಎಷ್ಟು ಸರಿ’ ಎಂದು ಆಕ್ಷೇಪಿಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ರೈತರನ್ನು ಭೇಟಿ ಮಾಡಿದ್ದು, ಬೆಳೆ ಪರಿಹಾರ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ. ರಾಜ್ಯ ಸರಕಾರ ರೈತರಿಗೆ ಯಾವುದೇ ಪರಿಹಾರ ನೀಡದೆಯೇ ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುತ್ತಾರೆಯೇ ಹೊರತು, ಪರಿಹಾರ ಮಾತ್ರ ನೀಡುವುದಿಲ್ಲ ಎಂದು ಅವರು ಟೀಕಿಸಿದರು.
ದಿಲ್ಲಿಗೆ ಹೋಗಿದ್ದೇಕೆ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಹೇಳಿದ ಕಾಂಗ್ರೆಸ್ ನಾಯಕರು ಹೊಸದಿಲ್ಲಿಗೆ ಹೋಗುತ್ತಿರುವುದೇಕೆ?. ನವೆಂಬರ್‍ನಲ್ಲಿ ಸಿಎಂ ಬದಲಾಗಲಿದ್ದಾರೆಂದು ನಾನು ಹೇಳಿದ್ದೆ. ಆದರೂ ಆ ರೀತಿ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಈಗ ಡಿ.ಕೆ.ಶಿವಕುಮಾರ್ ಸೋದರರು ದಿಲ್ಲಿಗೆ ಹೋಗಿ ಕುಳಿತಿದ್ದಾರೆ ಎಂದರು.
ಸಿಎಂ ಬದಲಾವಣೆ ಇಲ್ಲವೆಂದ ಮೇಲೆ ಎಲ್ಲರೂ ಮಲ್ಲಿಕಾರ್ಜುನ ಖರ್ಗೆಯವನ್ನು ಏಕೆ ಭೇಟಿಯಾಗುತ್ತಿದ್ದಾರೆ?. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿದಿಲ್ಲ, ವನ್ಯಜೀವಿ-ಮಾನವ ಸಂಘರ್ಷ ಜೋರಾಗಿದೆ, ಮಳೆ ಹಾನಿ ಪರಿಹಾರ ನೀಡಿಲ್ಲ. ಹೀಗೆ ಅನೇಕ ಸಮಸ್ಯೆಗಳಿದ್ದರೂ ಸಿಎಂ ಕುರ್ಚಿಗಾಗಿ ಸ್ಪರ್ಧೆ ನಡೆಸಿದ್ದಾರೆ. ಸಂಪುಟ ವಿಸ್ತರಣೆಯಾದರೆ ಡಿ.ಕೆ.ಶಿವಕುಮಾರ್‍ಗೆ ಪಂಗನಾಮ ಸಿಗಲಿದೆ ಎಂದು ಅವರು ಲೇವಡಿ ಮಾಡಿದರು.
ಬೆಳಗಾವಿಯ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಬಗ್ಗೆ ಅರಣ್ಯ ಸಚಿವರು ಉತ್ತರ ನೀಡಬೇಕಿದೆ. ಇದು ಆಘಾತಕಾರಿ ಸಂಗತಿಯಾಗಿದ್ದು, ಈ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ. ಅಧಿವೇಶನದಲ್ಲಿ ಆರಂಭದಿಂದಲೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿದೆ ಎಂದು ಅವರು ತಿಳಿಸಿದರು.