ಹೆಚ್ಚು ಸಾಲ ಮಾಡಿದ ಸಿಎಂ ಸಿದ್ದರಾಮಯ್ಯ : ಆರ್.ಅಶೋಕ್
ಬೆಂಗಳೂರು : ‘ರಾಜ್ಯದಲ್ಲಿ ಅತ್ಯಂತ ಹೆಚ್ಚು 2 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾಲ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಿಎಂ ಸಿದ್ದರಾಮಯ್ಯನವರು ಬೆಲೆ ಏರಿಕೆ, ಅಕ್ರಮ, ಹಗರಣಗಳ ಚಾಂಪಿಯನ್ ಆಗಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇಂದಿಲ್ಲಿ ಟೀಕಿಸಿದ್ದಾರೆ.
ಶುಕ್ರವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ‘ವರ್ಷ ಎರಡೂವರೆ ಕನ್ನಡಿಗರಿಗೆ ಬಲು ಹೊರೆ’ ‘ಕಾಂಗ್ರೆಸ್ ಕರ್ಮಕಾಂಡಗಳ ಅನಾವರಣ’ ಕುರಿತ ವಿಡಿಯೋ ಮತ್ತು ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿದ್ಯುತ್, ಹಾಲು, ನೋಂದಣಿ ಶುಲ್ಕ, ಪೆಟ್ರೋಲ್, ಡೀಸೆಲ್, ಅಬಕಾರಿ ಸೇರಿದಂತೆ 25ಕ್ಕೂ ಅಧಿಕ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಒಂದೇ ವರ್ಷದಲ್ಲಿ ಇಷ್ಟು ಬೆಲೆ ಏರಿಸಿದ ನಂಬರ್ ಒನ್ ಸರಕಾರ ಇದು ಎಂದು ದೂರಿದರು.
ರೈತರು, ಗುತ್ತಿಗೆದಾರರ ಆತ್ಮಹತ್ಯೆಗೆ ಈ ಸರಕಾರ ಕಾರಣವಾಗಿದೆ. ಜಾತಿಗಳ ನಡುವೆ ಬೆಂಕಿ ಹಚ್ಚುವುದರಲ್ಲಿ ಚಾಂಪಿಯನ್, ದಿಲ್ಲಿಗೆ ಹಣ ಕಳಿಸುವುದರಲ್ಲೂ ಇವರೇ ಚಾಂಪಿಯನ್. ಈ ರೀತಿಯಲ್ಲೇ ಸಿದ್ದರಾಮಯ್ಯ ಚಾಂಪಿಯನ್ ಆಗಿದ್ದಾರೆ ಎಂದು ಟೀಕಿಸಿದ ಅವರು, ಸಿದ್ದರಾಮಯ್ಯನವರು ನಮಗೆ ಬೇಡ ಎಂದು ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದ ಶಾಸಕರೇ ದಿಲ್ಲಿಗೆ ಹೋಗಿ ದೂರು ನೀಡಿದ್ದಾರೆ ಎಂದು ಹೇಳಿದರು.
ಸರಕಾರ ಬರೀ ಸುಳ್ಳು ಹೇಳುತ್ತಿದ್ದು, ಜನರ ಪಾಲಿಗೆ ಗೋಳು, ರೈತರಿಗೆ ಹೂಳು. ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ಕಿತ್ತಾಟ ಆರಂಭವಾಗಿದೆ. ಪರ-ವಿರೋಧ ಹೊಸದಿಲ್ಲಿ ಯಾತ್ರೆ ನಡೆಯುತ್ತಿದೆ. ನಿಜಕ್ಕೂ ಕಾಂಗ್ರೆಸ್ ಪಕ್ಷದ ಒಳಗೆ ಏನು ನಡೆಯುತ್ತಿದೆ ಎಂಬುದು ಜನರಿಗೆ ಗೊತ್ತಾಗುತ್ತಿಲ್ಲ. ಈ ಆಟಾಟೋಪಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಕೋರಿದರು.