ಜೈಲಿನಲ್ಲಿರುವ ಶಾಸಕರಿಂದ ಡಿ.ಕೆ.ಶಿವಕುಮಾರ್ ಸಹಿ: ಆರ್.ಅಶೋಕ್
ಬೆಂಗಳೂರು : ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಇಬ್ಬರು ಶಾಸಕರ ಸಹಿ ಹಾಕಿಸಲೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೋಗಿದ್ದರು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ‘ಅನ್ನದಾತರಿಗೆ ಕೈಕೊಟ್ಟ ಕಾಂಗ್ರೆಸ್ ಸರಕಾರ’ ಎಂಬ ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ಕಳೆದ 6 ತಿಂಗಳಿನಿಂದ ಕುರ್ಚಿ ಕಿತ್ತಾಟ ಮುಂದುವರೆಸಿದೆ. ಕುರ್ಚಿಯಲ್ಲಿ ಯಾರು ಕುಳಿತುಕೊಳ್ಳಬೇಕೆಂದು ಹೊಡೆದಾಟ, ಬಡಿದಾಟ ನಡೆಯುತ್ತಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಕುರ್ಚಿಯ 4 ಕಾಲುಗಳನ್ನು ಒಬ್ಬೊಬ್ಬರು ಕಿತ್ತುಕೊಂಡು ಹೋಗಿದ್ದಾರೆ. ಸಿದ್ದರಾಮಯ್ಯ, ಶಿವಕುಮಾರ್, ಪರಮೇಶ್ವರ್, ಸತೀಶ್ ಜಾರಕಿಹೊಳಿ ಈ ಕುರ್ಚಿ ಕಾಲುಗಳನ್ನು ಕಿತ್ತುಕೊಂಡಿದ್ದಾರೆ. ಕರ್ನಾಟಕದಲ್ಲಿ ಇವತ್ತು ಮುಖ್ಯಮಂತ್ರಿ ಕುರ್ಚಿಯೇ ಇಲ್ಲ ಎಂದು ಅವರು ವ್ಯಂಗ್ಯವಾಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷಕ್ಕೆ ಹೆಸರಿಗಷ್ಟೇ ಅಧ್ಯಕ್ಷರು. ಖರ್ಗೆಯವರ ಕುರ್ಚಿಗೆ ಶಕ್ತಿ ಇಲ್ಲ. ಎಐಸಿಸಿ ಅಧ್ಯಕ್ಷರೇ ಹೈಕಮಾಂಡ್ ಆಗಿರಬೇಕಿತ್ತು. ಆದರೆ, ಅವರು ಪರಾವಲಂಬಿ ಎಂದು ಅಶೋಕ್ ತಿಳಿಸಿದರು.