ಬೆಂಗಳೂರು : ಮೇಕೆದಾಟು ಅಣೆಕಟ್ಟು ಕನ್ನಡಿಗರ ಹಕ್ಕು. ಅದು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದ ಸರಕಲ್ಲ. ಕನ್ನಡಿಗರ ನೀರಿನ ಹಕ್ಕಿನ ವಿಚಾರದಲ್ಲಿ ನಿಮ್ಮ ರಾಜಕೀಯ ನಾಟಕಗಳಿಗೆ ಇನ್ನು ಅವಕಾಶವಿಲ್ಲ. ಮೊದಲು ನಿಮ್ಮ ಪಕ್ಷದ ತಮಿಳುನಾಡು ನಾಯಕರಿಗೆ ಉತ್ತರ ಕೊಡಿ, ನಂತರ ಕೇಂದ್ರ ಸರಕಾರಕ್ಕೆ ಪತ್ರ ಬರೆಯಿರಿ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಲಹೆ ನೀಡಿದ್ದಾರೆ.

ರವಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್‍ನ ಮುಖವಾಡ ಕಳಚಿದೆ. ಕರ್ನಾಟಕದಲ್ಲಿ ಕನ್ನಡಿಗರ ಹೆಸರಿನಲ್ಲಿ ರಾಜಕೀಯ, ತಮಿಳುನಾಡಿನಲ್ಲಿ ಕನ್ನಡಿಗರ ಹಕ್ಕಿಗೇ ಕೊಡಲಿ. ಅಧಿಕಾರಕ್ಕಾಗಿ ‘ನಮ್ಮ ನೀರು, ನಮ್ಮ ಹಕ್ಕು' ಎಂದು ಬೀದಿನಾಟಕವಾಡಿ, ಪಾದಯಾತ್ರೆಯ ಹೆಸರಿನಲ್ಲಿ ಕನ್ನಡಿಗರ ಭಾವನೆಗಳನ್ನು ಬಂಡವಾಳ ಮಾಡಿಕೊಂಡ ಕಾಂಗ್ರೆಸ್, ಇಂದು ತನ್ನದೇ ಪಕ್ಷದ ತಮಿಳುನಾಡು ನಾಯಕರ ಮೇಕೆದಾಟು ವಿರೋಧದ ಮುಂದೆ ಮೌನಕ್ಕೆ ಶರಣಾಗಿದೆ. ಈ ಮೌನವೇ ಕಾಂಗ್ರೆಸ್ ನಿಜವಾದ ಕನ್ನಡಪರ ಕಾಳಜಿಗೆ ಸಾಕ್ಷಿ’ ಎಂದು ಟೀಕಿಸಿದ್ದಾರೆ.

‘ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಕಂ ಟ್ಯಾಗೋರ್ ಮೇಕೆದಾಟು ಯೋಜನೆ ಕಾನೂನುಬಾಹಿರ ಎಂದು ಬಣ್ಣಿಸಿ, ಅದನ್ನು ತಡೆಯಲು ಕಾನೂನು ಕ್ರಮ ಕೈಗೊಳ್ಳುವಂತೆ ಅಲ್ಲಿನ ಸಿಎಂ ಜೋಸೆಫ್ ವಿಜಯ್‍ಗೆ ಒತ್ತಾಯಿಸಿದ್ದಾರೆ. ತಮಿಳುನಾಡು ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ’ ಎಂದು ಅವರು ಉಲ್ಲೇಖಿಸಿದ್ದಾರೆ.

ಕರ್ನಾಟಕದಲ್ಲಿ ಪಾದಯಾತ್ರೆ, ತಮಿಳುನಾಡಿನಲ್ಲಿ ಕಾನೂನು ಹೋರಾಟ. ಕನ್ನಡಿಗರ ಪರ ಘೋಷಣೆ, ತಮಿಳುನಾಡಿನಲ್ಲಿ ಕನ್ನಡಿಗರ ಹಕ್ಕಿನ ವಿರುದ್ಧ ಸಮರ. ಕಾಂಗ್ರೆಸ್‍ನ ಈ ಇಬ್ಬಗೆಯ ನೀತಿಗೆ ಏನೆನ್ನಬೇಕು? ಇದು ರಾಜಕೀಯ ಬೂಟಾಟಿಕೆಯ ಪರಾಕಾಷ್ಠೆ ಯಲ್ಲವೇ?. ಸಿಎಂ ಡಿ.ಕೆ.ಶಿವಕುಮಾರ್‍ರೇ, ಮೈಕ್ ಮುಂದೆ ನಿಂತು ಕನ್ನಡಿಗರ ಪರ ವೀರಾವೇಶದ ಭಾಷಣ ಮಾಡುವುದರಿಂದ ಅಣೆಕಟ್ಟು ನಿರ್ಮಾಣವಾಗುವುದಿಲ್ಲ. ನಿಮ್ಮದೇ ಪಕ್ಷದ ನಾಯಕರು ಈ ಯೋಜನೆಯನ್ನು ತಡೆಯಲು ಪಿತೂರಿ ನಡೆಸುವಾಗ ನೀವು ತೋರುತ್ತಿರುವ ಈ ಮೌನವೇ ನಿಮ್ಮ ಬದ್ಧತೆಯ ಬಂಡವಾಳ ಬಯಲು ಮಾಡಿದೆ’ ಎಂದು ಅಶೋಕ್ ಟೀಕಿಸಿದ್ದಾರೆ.

‘ಕಾಂಗ್ರೆಸ್ ಹೈಕಮಾಂಡ್‍ಗೆ ಕರ್ನಾಟಕದ ಮೇಲೆ ನಿಜವಾದ ಕಾಳಜಿ ಇದೆಯೇ?. ರಾಹುಲ್ ಗಾಂಧಿಗೆ ಕರ್ನಾಟಕದ ನೀರಿನ ಹಕ್ಕು ಮುಖ್ಯವೇ ಅಥವಾ ತಮಿಳುನಾಡಿನ ರಾಜಕೀಯ ಲೆಕ್ಕಾಚಾರ ಮುಖ್ಯವೇ? ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ. ಕರ್ನಾಟಕದಲ್ಲಿ ಅಧಿಕಾರ ಬೇಕು, ತಮಿಳುನಾಡಿನಲ್ಲಿ ರಾಜಕೀಯ ಮೈತ್ರಿ ಬೇಕು. ಆದರೆ, ಕರ್ನಾಟಕದ ಹಿತಾಸಕ್ತಿ ಮಾತ್ರ ಯಾರಿಗೂ ಬೇಡವೇ?. ಕಾಂಗ್ರೆಸ್‍ಗೆ ಕನ್ನಡಿಗರು ಬೇಕಾಗಿರುವುದು ಕೇವಲ ಮತಗಳಿಗಾಗಿ ಮಾತ್ರವೇ?. ಚುನಾವಣೆಯ ಸಂದರ್ಭದಲ್ಲಿ ಕನ್ನಡಿಗರ ನೀರಿನ ಹಕ್ಕಿನ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ, ಅಧಿಕಾರ ಸಿಕ್ಕ ಬಳಿಕ ಅದೇ ಹಕ್ಕಿನ ವಿರುದ್ಧ ತಮ್ಮದೇ ಪಕ್ಷದ ನಾಯಕರು ನಿಂತರೂ ತುಟಿ ಬಿಚ್ಚದಿರುವುದು ನಾಚಿಕೆಗೇಡಿನ ರಾಜಕಾರಣ’ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪ್ರಕಾಶ್ ಸಿ. ರಾಮಜೋಗಿಹಳ್ಳಿ/ವಾರ್ತಾಭಾರತಿ

contributor