ನಾಳೆ ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿರುವ ಸಿಎಂ, ಡಿಸಿಎಂ
ರಾಹುಲ್ ಗಾಂಧಿ | PC : PTI
ಬೆಂಗಳೂರು : ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ‘ನಾಯಕತ್ವ ಬದಲಾವಣೆ’ಯ ಸುತ್ತ ಚರ್ಚೆ ನಡೆಯುತ್ತಿದ್ದು, ಬೆಂಬಲಿಗರ ಪರ-ವಿರೋಧ ಹೇಳಿಕೆಗಳು ಬಿರುಸುಗೊಂಡಿವೆ. ಈ ಮಧ್ಯೆ ನಾಳೆ (ಜ.13) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲೋಕಸಭೆ ಪ್ರತಿಪಕ್ಷ ನಾಯಕರೂ ಆಗಿರುವ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ತಮಿಳುನಾಡಿನ ನೀಲಗಿರಿಸ್ ಜಿಲ್ಲೆಯಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮ ನಿಮಿತ್ತ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನಾಳೆ(ಜ.13) ಮಧ್ಯಾಹ್ನ 1:30ರ ಸುಮಾರಿಗೆ ಮೈಸೂರಿಗೆ ಆಗಮಿಸುತ್ತಿದ್ದು, ಸಿಎಂ ಹಾಗೂ ಡಿಸಿಎಂ ಅವರು, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ಹಾಗೂ ‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ ಬದಲಾವಣೆ ಮಾಡಿರುವ ಕೇಂದ್ರ ಸರಕಾರದ ವಿರುದ್ಧ ಹೋರಾಟ ರೂಪಿಸುವ ಸಂಬಂಧ ರಾಹುಲ್ ಗಾಂಧಿ ಅವರೊಂದಿಗೆ ಉಭಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಆ ಹಿನ್ನೆಲೆಯಲ್ಲಿಯೇ ನಾಳೆ(ಜ.13) ಮಧ್ಯಾಹ್ನ 1ಗಂಟೆಯ ಸುಮಾರಿಗೆ ಇಲ್ಲಿನ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈಸೂರಿಗೆ ಪ್ರಯಾಣ ಬೆಳೆಸಲಿದ್ದು, ಮಧ್ಯಾಹ್ನ 1:30ರ ಸುಮಾರಿಗೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಸಾಧ್ಯತೆಗಳಿವೆ.
ಇದೇ ವೇಳೆ ಮೈಸೂರಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಸಿಎಂ ಹಾಗೂ ಡಿಸಿಎಂ ಅವರು, ಸಂಜೆ 6:30ರ ಸುಮಾರಿಗೆ ಮೈಸೂರಿನಿಂದ ವಿಶೇಷ ವಿಮಾನ ನಿಲ್ದಾಣ ರಾಜಧಾನಿ ಬೆಂಗಳೂರಿಗೆ ಹಿಂದಿರುಗಲಿದ್ದಾರೆ ಎಂದು ಗೊತ್ತಾಗಿದೆ.