Dharwad | ಸಾಮೂಹಿಕ ಅತ್ಯಾಚಾರ ಪ್ರಕರಣ; ವರದಿ ಸಲ್ಲಿಸಲು ರಾಜ್ಯ ಮಹಿಳಾ ಆಯೋಗ ನಿರ್ದೇಶನ
ಬೆಂಗಳೂರು : ಇತ್ತೀಚೆಗೆ ಧಾರವಾಡದಲ್ಲಿ ದುಷ್ಕರ್ಮಿಗಳು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿಯನ್ನು ಸಲ್ಲಿಸಬೇಕು ಎಂದು ರಾಜ್ಯ ಮಹಿಳಾ ಆಯೋಗವು ಧಾರವಾಡ ಜಿಲ್ಲೆಯ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ.
ಸೋಮವಾರ ಆಯೋಗದ ಕಾರ್ಯದರ್ಶಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು, ಧಾರವಾಡದಲ್ಲಿರುವ ಹೆಗ್ಗೇರಿ ಮೈದಾನದ ಬಳಿ ಮಹಿಳೆಯನ್ನು ಆಟೋದಲ್ಲಿ ಕರೆದೊಯ್ದು, ಆಕೆಗೆ ಮದ್ಯಪಾನ ಮಾಡಿಸಿ, ಸಾಮೂಹಿಕ ಅತ್ಯಾಚಾರ ನಡೆಸಿರುವುದು ವರದಿಯಾಗಿದೆ. ಅಲ್ಲದೆ, ಅತ್ಯಾಚಾರ ನಡೆಸಿರುವುದನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅಮಾನುಷ ಕೃತ್ಯದ ಬಗ್ಗೆಯೂ ವರದಿಯಾಗಿದೆ ಎಂದಿದ್ದಾರೆ.
ಈ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಬೇಕು. ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ವರದಿ ನೀಡಬೇಕು ಎಂದು ಸಂಬಂಧಪಟ್ಟ ಠಾಣಾಧಿಕಾರಿಯವರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.