ವಿದ್ಯಾರ್ಥಿಗಳ ಧ್ವನಿಗೆ ರಾಹುಲ್ ಗಾಂಧಿ ಬೆಂಬಲ; ʼಪಾರದರ್ಶಕ ಪರೀಕ್ಷಾ ವ್ಯವಸ್ಥೆಗೆ ಆಗ್ರಹ

Update: 2026-08-23 00:03 IST

ಹ'

ಬೆಂಗಳೂರು : ‘ಛಾತ್ರೋನ್ ಕಿ ಗೂಂಜ್’ ಅಭಿಯಾನದ ಅಂಗವಾಗಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಬೆಂಗಳೂರಿನ ವಿದ್ಯಾರ್ಥಿಗಳ ಜೊತೆ ವರ್ಚುವಲ್ ಸಂವಾದ ನಡೆಸಿ ನ್ಯಾಯಯುತ ಶಿಕ್ಷಣ ವ್ಯವಸ್ಥೆ ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯು ಕೆ.ಆರ್.ಪುರಂನ ಎಸ್.ಇ.ಎ. ಬಹುಪಯೋಗಿ ಸಭಾಂಗಣದಲ್ಲಿ ಶನಿವಾರ ಬೃಹತ್ ಎಲ್‌ಇಡಿ ಪರದೆ ಮೂಲಕ ಏರ್ಪಡಿಸಿದ್ದ ವರ್ಚುವಲ್ ಸಂವಾದದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ಪಾರದರ್ಶಕ ಪರೀಕ್ಷೆ ಮತ್ತು ನ್ಯಾಯಯುತ ಶಿಕ್ಷಣ ವ್ಯವಸ್ಥೆಗಾಗಿ ದನಿಗೂಡಿಸಿದರು.

ಸಂವಾದದಲ್ಲಿ ರಾಹುಲ್ ಗಾಂಧಿಯವರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಸಮಾಜದಲ್ಲಿನ ಪುರುಷ ಪ್ರಧಾನ ವ್ಯವಸ್ಥೆ, ಹೆಣ್ಣನ್ನು ಕೀಳಾಗಿ ಭಾವನೆ, ಮನುಸ್ಮತಿಯಲ್ಲಿ ಹೆಣ್ಣನ್ನು ಚಿತ್ರಿಸಿರುವ ರೀತಿ, ಹೆಣ್ಣನ್ನು ನಿಯಂತ್ರಿಸುವ ತಂತ್ರ, ಪ್ರಶ್ನೆಪತ್ರಿಕೆ ಸೋರಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮ, ನಿರುದ್ಯೋಗ ಹಾಗೂ ಹೆಚ್ಚುತ್ತಿರುವ ಶೈಕ್ಷಣಿಕ ವೆಚ್ಚದ ಕುರಿತು ಮಾತನಾಡಿದರು.

ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಮಾತನಾಡಿ, ಕಳೆದ ಒಂದು ದಶಕದಲ್ಲಿ 152 ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣಗಳಿಂದ ಸುಮಾರು 7.5 ಕೋಟಿ ಅಭ್ಯರ್ಥಿಗಳು ಬಾಧಿತರಾಗಿದ್ದಾರೆ. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಇಂದಿನ ನಿಜವಾದ ಅಗತ್ಯ ಎಂದು ಒತ್ತಿ ಹೇಳಿದರು.

ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವ ವಿದ್ಯಾರ್ಥಿಗೆ ನ್ಯಾಯ ಸಿಗಬೇಕು. ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಅಕ್ರಮಗಳಿಂದ ಅವರ ಭವಿಷ್ಯ ಹಾಳಾಗಬಾರದು. ಜೊತೆಗೆ, ಯುವಕರ ಭವಿಷ್ಯವನ್ನು ಕೇವಲ ಪರೀಕ್ಷಾ ಅಂಕಗಳಿಗೆ ಸೀಮಿತಗೊಳಿಸದೆ, ಗುಣಮಟ್ಟದ ಶಿಕ್ಷಣ, ಉದ್ಯೋಗಾವಕಾಶ ಮತ್ತು ಸಮಾನ ಅವಕಾಶಗಳೊಂದಿಗೆ ಜೋಡಿಸುವ ಅಗತ್ಯವಿದೆ ಎಂದು ಸಂದೇಶ ಸಾರಿದರು.

ಈ ವೇಳೆ ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ಮಾಜಿ ಶಾಸಕಿ ಪೂರ್ಣಿಮಾ, ಕೆಪಿವೈಸಿಸಿ ಪದಾಧಿಕಾರಿಗಳು, ಸ್ವಯಂ ಸೇವಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News