ಕರ್ನಾಟಕ ಹಾಗೂ ಕೇರಳಂ ರಾಜ್ಯ ಸಹೋದರರಂತೆ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

Update: 2026-08-22 21:43 IST

ಅಲಪುಳ್ಳ : ಕರ್ನಾಟಕ ಹಾಗೂ ಕೇರಳಂ ರಾಜ್ಯ ಸಹೋದರರಂತಿದೆ. ಎರಡೂ ರಾಜ್ಯಗಳು ಪರಸ್ಪರ ಸಹಕಾರದೊಂದಿಗೆ ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶನಿವಾರ ಕೇರಳಂನ ಅಲಪುಳ್ಳದಲ್ಲಿ ನಡೆದ 72ನೇ ಆವೃತ್ತಿಯ ನೆಹರೂ ಟ್ರೋಫಿ ಬೋಟ್ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಬಹಳ ಸಂತೋಷ ತಂದಿದೆ. ನಮ್ಮ ಶ್ರೇಷ್ಠ ನಾಯಕ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಈ ಕ್ರೀಡೆಗೆ ಆದ್ಯತೆ ನೀಡಿ ದೊಡ್ಡ ಸಂದೇಶ ನೀಡಿದರು ಎಂದು ಹೇಳಿದರು.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆಲ್ಲ ಸಮಾಜದ ಎಲ್ಲ ವರ್ಗದ ಜನ ಅಧಿಕಾರದಲ್ಲಿದ್ದಂತೆ. ಇಂದು ಈ ರಾಜ್ಯದ ಎಲ್ಲ ಯುವಕರು ಈ ಕ್ರೀಡಾಕೂಟವನ್ನು ಆನಂದಿಸುತ್ತಿದ್ದೀರಿ. ಕರ್ನಾಟಕದಲ್ಲಿ ಮೈಸೂರು ದಸರಾವನ್ನು ಸಂಭ್ರಮದಿಂದ ಆಚರಿಸುವಂತೆ ಕೇರಳಂನಲ್ಲಿ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿದರು.

ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಕೂಡ ನಿಮ್ಮ ಜೊತೆ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಾವು ನೀರು, ಹವಾಮಾನ, ಸಂಸ್ಕೃತಿ ಸೇರಿದಂತೆ ಎಲ್ಲವನ್ನು ಪರಸ್ಪರ ಹಂಚಿಕೊಳ್ಳುತ್ತೇವೆ. ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಸಂಸತ್ ಪ್ರವೇಶಿಸಲು ಕರ್ನಾಟಕ ವೇದಿಕೆಯಾಗಿತ್ತು. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಸಂಸತ್ ಪ್ರವೇಶಿಸಲು ಕೇರಳಂ ರಾಜ್ಯ ವೇದಿಕೆಯಾಗಿದೆ ಎಂದು ಅವರು ಸ್ಮರಿಸಿದರು.

ಕಾಂಗ್ರೆಸ್ ಕೊಟ್ಟ ಮಾತು ಉಳಿಸಿಕೊಳ್ಳುತ್ತದೆ: ಮುಖ್ಯಮಂತ್ರಿ ಸತೀಶನ್ ಅವರ ನೇತೃತ್ವದ ಸರಕಾರ ಕೇರಳಂ ರಾಜ್ಯದ ಕಲ್ಯಾಣಕ್ಕೆ ಶ್ರಮಿಸಲಿದ್ದು, ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲಿದೆ. ಯುಡಿಎಫ್ ಮೈತ್ರಿಕೂಟ ಒಟ್ಟಾಗಿ ಕೆಲಸ ಮಾಡಲಿದ್ದು, ನಾವೆಲ್ಲರೂ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುವ ದೊಡ್ಡ ಸಂದೇಶ ರವಾನಿಸಲಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಇಲ್ಲಿರುವ ಎಲ್ಲ ಸ್ಪರ್ಧಿಗಳು ಹಾಗೂ ಆಡಳಿತ ಮಂಡಳಿಯವರಿಗೆ ಶುಭ ಕೋರುತ್ತೇನೆ. ಕರ್ನಾಟಕ ನಿಮ್ಮ ಜತೆಗೆ ನಿಲ್ಲಲಿದೆ, ನೀವು ಕರ್ನಾಟಕ ರಾಜ್ಯದ ಜತೆಯಾಗಿ ನಿಲ್ಲಬೇಕು. ಎರಡೂ ರಾಜ್ಯದವರು ಸಹೋದರರಂತೆ ಸಾಗಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೇರಳಂ ಗೃಹ ಸಚಿವ ರಮೇಶ್ ಚೆನ್ನಿತಲ, ಸಂಸದ ಜಿ.ಸಿ.ಚಂದ್ರಶೇಖರ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News