Bengaluru | ಕೇವಲ 200ರೂ. ಹಣ ನೀಡದ್ದಕ್ಕೆ ಮಂಗಳಮುಖಿ ಹತ್ಯೆ: ಆರೋಪಿಯ ಬಂಧನ

Update: 2026-08-22 21:35 IST

ಬೆಂಗಳೂರು : ಕೇವಲ 200 ರೂಪಾಯಿ ದೋಚುವ ಯತ್ನದಲ್ಲಿ ಮಂಗಳಮುಖಿಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಆ.21 (ಶುಕ್ರವಾರ) ರಾತ್ರಿ ಮೆಜೆಸ್ಟಿಕ್‍ನ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.

ಮೃತರನ್ನು ದೇವಿ(27) ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಗೌತಮ್ (29) ಎಂಬಾತನನ್ನು ಉಪ್ಪಾರಪೇಟೆ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಮೃತ ದೇವಿ ಅವರು ಆ.21ರ ತಡರಾತ್ರಿ ಸುಮಾರು 3ಗಂಟೆಯ ವೇಳೆಯಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದ ಹೊರಭಾಗದಲ್ಲಿ ನಿಂತಿದ್ದಾಗ ಈ ಘಟನೆ ಸಂಭವಿಸಿದೆ. ರಾಮಮೂರ್ತಿ ನಗರದ ನಿವಾಸಿಯಾದ ಗೌತಮ್ (29) ಎಂಬಾತ ದ್ವಿಚಕ್ರ ವಾಹನದಲ್ಲಿ ಮೆಜೆಸ್ಟಿಕ್ ಬಳಿ ಬಂದಿದ್ದ.

ಮದ್ಯಪಾನ ಮಾಡಿದ್ದ ಆರೋಪಿ ಗೌತಮ್, ರಾತ್ರಿ ವೇಳೆಯಲ್ಲಿ ಜನರ ಬಳಿ ದರೋಡೆ ಮಾಡುವ ಉದ್ದೇಶದಿಂದಲೇ ಅಲ್ಲಿಗೆ ಬಂದಿದ್ದ. ಸ್ಥಳದಲ್ಲಿದ್ದ ದೇವಿಯ ಬಳಿ ಬಂದ ಆರೋಪಿ ಗೌತಮ್ 200 ರೂ.ಹಣ ನೀಡುವಂತೆ ಪಟ್ಟುಹಿಡಿದಿದ್ದ. ಆದರೆ, ದೇವಿ ಹಣ ನೀಡಲು ನಿರಾಕರಿಸಿದಾಗ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಈ ವೇಳೆ, ಆಕ್ರೋಶಗೊಂಡ ಆರೋಪಿ ತನ್ನ ಬಳಿಯಿದ್ದ ಡ್ರ್ಯಾಗರ್‍ನಿಂದ ಮೊದಲಿಗೆ ದೇವಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಬಳಿಕ ಅವರಿಂದ ಬ್ಯಾಗ್ ಮತ್ತು ಮೊಬೈಲ್ ಫೋನ್ ಕಸಿದುಕೊಂಡಿದ್ದಾನೆ. ದೇವಿ ಪ್ರತಿರೋಧಿಸಲು ಯತ್ನಿಸಿದಾಗ ಡ್ರ್ಯಾಗರ್‍ನಿಂದ ಮತ್ತೆ ಮೂರು ಬಾರಿ ದೇಹಕ್ಕೆ ಚುಚ್ಚಿ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ದೇವಿ ಅವರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಕೃತ್ಯ ಎಸಗಿದ ಬಳಿಕ ಆರೋಪಿ ಗೌತಮ್, ದೇವಿಯ ಬ್ಯಾಗ್‍ನಲ್ಲಿದ್ದ ನಗದು ಮತ್ತು ಮೊಬೈಲ್ ಫೋನ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್., ಹತ್ಯೆ ಪ್ರಕರಣ ವರದಿಯಾದ ಕೂಡಲೇ ಉಪ್ಪಾರಪೇಟೆ ಠಾಣೆ ಪೊಲೀಸರ ತಂಡ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದೆ.

ಆರೋಪಿ ಮದ್ಯಪಾನ ಮಾಡಿ ದರೋಡೆ ನಡೆಸುವ ಉದ್ದೇಶದಿಂದ ಸ್ಥಳಕ್ಕೆ ಬಂದಿದ್ದು, ಹಣ ನೀಡಲು ನಿರಾಕರಿಸಿದಾಗ ಡ್ರ್ಯಾಗರ್‍ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಈ ಘಟನೆ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯಿಂದ ಕಳವು ಮಾಡಿದ್ದ ಮೊಬೈಲ್ ಮತ್ತು ಹಣವನ್ನು ಜಪ್ತಿ ಮಾಡಲಾಗಿದ್ದು, ಬಂಧಿತನ ವಿಚಾರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News