×
Ad

ಬೆಂಗಳೂರಿನಲ್ಲಿ ಮುಂದುವರೆದ ಮಳೆ, ವಾಹನ ಸವಾರರು ಪರದಾಟ

Update: 2025-07-21 21:01 IST

ಬೆಂಗಳೂರು : ನಗರದಲ್ಲಿ ಎರಡು ದಿನಗಳಿಂದ ಸಾಧಾರಣ ಮಳೆಯಾಗಿದ್ದು, ಸೋಮವಾರವೂ ಮಳೆ ಬಿದ್ದಿದೆ. ಕೆ.ಆರ್. ಮಾರುಕಟ್ಟೆ, ಮೆಜೆಸ್ಟಿಕ್, ಹೆಬ್ಬಾಳ, ಯಶವಂತಪುರ, ಬಾಗಲೂರು, ಬೆಳ್ಳಂದೂರು, ಆರ್.ಟಿ.ನಗರ, ಆರ್.ಆರ್. ನಗರ ಸುತ್ತಮುತ್ತಾ ಮಳೆಯಾಗಿದೆ. ಮಳೆಯಿಂದಾಗಿ ಕೆಲ ಕಾಲ ವಾಹನ ಸವಾರರು ಪರದಾಡಿದರು.

ರಾಧಾಕೃಷ್ಣ ಥಿಯೇಟರ್ ಬಳಿ ಮರ ಬಿದ್ದಿದ್ದರಿಂದ ಆರ್.ಟಿ. ನಗರದ ಕಡೆಗೆ ನಿಧಾನಗತಿಯ ಸಂಚಾರವಿತ್ತು. ಕಾಪೋರೇಷನ್, ಕೆ.ಆರ್. ಸರ್ಕಲ್ ಸೇರಿದಂತೆ ಪ್ರಮುಖ ಜಂಕ್ಷನ್‍ಗಳಲ್ಲಿ ಮಳೆಯಿಂದಾಗಿ ವಾಹನ ದಟ್ಟನೆ ಉಂಟಾಗಿತ್ತು. ದ್ವಿಚಕ್ರ ವಾಹನ ಸವಾರರು ರಸ್ತೆಗಳಲ್ಲಿಯೇ ವಾಹನಗಳನ್ನು ನಿಲ್ಲಿಸಿ ರಸ್ತೆ ಬದಿಯಲ್ಲಿರುವ ವ್ಯಾಪಾರ ಮಳಿಗೆ, ಪ್ರಯಾಣಿಕರ ತಂಗುದಾಣಗಳಲ್ಲಿ ಆಶ್ರಯ ಪಡೆದಿದ್ದರು.

ಇನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ನಂತರ ಸಾಧಾರಣ ಮಳೆಯಾಗುವ ಸಂಭವವಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಜು.24ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News