×
Ad

ಬಸ್ ಚಾಲಕರು, ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು : ರಾಮಲಿಂಗಾರೆಡ್ಡಿ

Update: 2025-06-17 20:31 IST

ಬೆಂಗಳೂರು : ಸಾರಿಗೆ ನಿಗಮಗಳ ಬಸ್ ಚಾಲಕರು, ನಿರ್ವಾಹಕರು ಪ್ರಯಾಣಿಕರೊಂದಿಗೆ ವಿಶೇಷವಾಗಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಹಾಗೆಯೇ ರಸ್ತೆ ಅಪಘಾತ ಸಂಭವಿಸದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿವಿಮಾತು ಹೇಳಿದ್ದಾರೆ.

ಮಂಗಳವಾರ ಇಲ್ಲಿನ ಶಾಂತಿನಗರದಲ್ಲಿರುವ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ‘ಸಾರಿಗೆ ನಿಗಮಗಳಲ್ಲಿ ಹೊಸದಾಗಿ ನೇಮಕಗೊಂಡಿರುವ 2000 ಚಾಲಕ-ಕಂ-ನಿರ್ವಾಹಕ ಹುದ್ದೆಗಳ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ವಿತರಣೆ’ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಸದಾಗಿ ನೇಮಕಗೊಂಡಿರುವ ಚಾಲನಾ ಸಿಬ್ಬಂದಿಗಳು ಸಂಸ್ಥೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದರು.

ನಾಲ್ಕು ಸಾರಿಗೆ ನಿಗಮಗಳಿಂದ ಸುಮಾರು 1000ಕ್ಕೂ ಹೆಚ್ಚು ಮೃತರ ಅವಲಂಭಿತರಿಗೆ ನೌಕರಿಯನ್ನು ನೀಡಲಾಗಿದೆ. ಸುಮಾರು 9 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಈಗಾಗಲೇ 7500 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಂಡಿದೆ. ಅಪಘಾತದಿಂದ ಮೃತಪಟ್ಟ ಚಾಲನಾ ಸಿಬ್ಬಂದಿಗಳ ಕುಟುಂಬವನ್ನು ಆರ್ಥಿಕವಾಗಿ ಸಧೃಡಗೊಳಿಸುವ ಸಲುವಾಗಿ ಒಂದು ಕೋಟಿ ರೂ. ವಿಮಾ ಯೋಜನೆ ಅಡಿ ಪರಿಹಾರ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ನಿಗಮದ ಅಧ್ಯಕ್ಷ ಎಸ್.ಆರ್ ಶ್ರೀನಿವಾಸ್ ಮಾತನಾಡಿ, ಕೆಎಸ್ಸಾರ್ಟಿಸಿಯಲ್ಲಿ 8 ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಯು ಸ್ಥಗಿತಗೊಂಡಿದ್ದು, ಸಚಿವ ರಾಮಲಿಂಗಾ ರೆಡ್ಡಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದರು. ಚಾಲನಾ ಸಿಬ್ಬಂದಿಗಳ ನೇಮಕಾತಿಯು ಮಾನವ ಹಸ್ತಕ್ಷೇಪವಿಲ್ಲದೇ ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆದಿದೆ. ಜತೆಗೆ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆಯಂತೆ ಘಟಕ ನಿಯೋಜನೆ ಮಾಡಲಾಗಿದೆ ತಿಳಿಸಿದರು.

ಕೆಎಸ್ಸಾರ್ಟಿಸಿಯ ಉಪಾಧ್ಯಕ್ಷ ಮೊಹಮ್ಮದ್ ರಿಝ್ವಾನ್ ನವಾಬ್ ಮಾತನಾಡಿ, ನೇಮಕಾತಿ ಪ್ರಕ್ರಿಯೆ ಆರಂಭವಾದಾಗ ಕೋವಿಡ್-19ರ ಹಿನ್ನಲೆಯಲ್ಲಿ ಸರಕಾರದ ನಿರ್ದೇಶನದಂತೆ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಹಲವು ವರ್ಷಗಳ ನಂತರ ನೇಮಕಾತಿ ಪ್ರಕ್ರಿಯೆಯು ಪ್ರಾರಂಭಗೊಂಡು ಚಾಲಕ-ಕಂ-ನಿರ್ವಾಹಕರು ನೇಮಕಗೊಂಡಿದ್ದಾರೆ. ನೇಮಕಗೊಂಡಿರುವ ಚಾಲನಾ ಸಿಬ್ಬಂದಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ ನಿಗಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೂ. 16ರ ಕೌನ್ಸಿಲಿಂಗ್‍ನಲ್ಲಿ ವಿಭಾಗ ಆಯ್ಕೆಮಾಡಿಕೊಂಡ ಅಭ್ಯರ್ಥಿಗಳಿಗೆ ನಿಯೋಜನಾ ಆದೇಶ ವಿತರಣೆ ಮಾಡಲಾಯಿತು. ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ನಿರ್ದೇಶಕಿ ಡಾ. ನಂದಿನಿದೇವಿ ಕೆ., ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕ ಇಬ್ರಾಹಿಂ ಮೈಗೂರ ಸೇರಿದಂತೆ ಕಾರ್ಮಿಕ ಮುಖಂಡರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

2 ಸಾವಿರ ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ ಒಟ್ಟು 25,494ಅರ್ಜಿಗಳು ಸ್ವೀಕೃತಗೊಂಡಿರುತ್ತದೆ. ದಾಖಲಾತಿ ಪರಿಶೀಲನೆಗೆ ಹಾಜರಾದ ಅಭ್ಯರ್ಥಿಗಳ ಪೈಕಿ 13,954 ಅಭ್ಯರ್ಥಿಗಳು ಚಾಲನಾ ವೃತ್ತಿ ಪರೀಕ್ಷೆ ಪಡೆಯಲು ಅರ್ಹರಾಗಿದ್ದರು. ಚಾಲನಾ ವೃತ್ತಿ ಪರೀಕ್ಷೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳಲ್ಲಿ ಮೆರಿಟ್, ಮೀಸಲಾತಿ ಅನುಸಾರ 2ಸಾವಿರ ಹುದ್ದೆಗಳಿಗೆ ಚಾಲಕ-ಕಂ-ನಿರ್ವಾಹಕರನ್ನು ಆಯ್ಕೆ ಮಾಡಲಾಗಿದೆ. ಜೂ.19ರವರೆಗೆ ಗಣಕೀಕೃತ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಲಾಗುತ್ತಿದ್ದು, ವಿಭಾಗ ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಜು.7ರೊಳಗಾಗಿ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News