×
Ad

ಕ್ಯೂಆರ್ ಕೋಡ್ ಇರುವ ಡಿಎಲ್, ಆರ್‌ಸಿ ಕಾರ್ಡ್ ವಿತರಣೆ : ರಾಮಲಿಂಗಾರೆಡ್ಡಿ

Update: 2025-12-03 22:40 IST

ಬೆಂಗಳೂರು : ರಾಜ್ಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ ಮಾಡಿರುವ ವಾಹನ ನೋಂದಣಿ ಪ್ರಮಾಣಪತ್ರ(ಆರ್‌ಸಿ) ಮತ್ತು ಚಾಲನಾ ಪರವಾನಗಿ(ಡಿಎಲ್) ನೀಡಲು ಕ್ರಮ ವಹಿಸಿದ್ದು, ಇಂದಿನಿಂದ(ಡಿ.3) ಆರ್‌ಸಿ ಕಾರ್ಡ್ ಅನ್ನು, ಡಿ.15ರಿಂದ ಡಿಎಲ್ ಅನ್ನು ವಿತರಣೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬುಧವಾರ ಶಾಂತಿನಗರದಲ್ಲಿನ ಆಯುಕ್ತರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಡ್ ಮೇಲೆ ಅಳವಡಿಕೆ ಮಾಡಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ಕಾರ್ಡ್‍ನ ಮಾಹಿತಿ ಪಡೆಯಬಹುದು. ಒಂದು ಕಾರ್ಡ್‍ಗೆ 200 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಇದರಲ್ಲಿ ಸರಕಾರಕ್ಕೆ 135.54 ರೂ., ಸೇವಾದಾರರಿಗೆ 64.46 ರೂ. ಪಾವತಿಯಾಗಲಿದೆ ಎಂದು ಹೇಳಿದರು.

ದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೊಸ ಸ್ಮಾರ್ಟ್ ಕಾರ್ಡ್ ಮುದ್ರಿಸಲಾಗುತ್ತಿದ್ದು, ಒಂದು ಗಂಟೆಗೆ 500 ರಿಂದ 600 ಕಾರ್ಡ್ ಮುದ್ರಣ ಆಗುತ್ತದೆ. ಪ್ರತಿದಿನ ಹದಿನೈದು ಸಾವಿರ ಕಾರ್ಡ್‍ಗಳು ಮುದ್ರಣ ಆಗಲಿದೆ. ಇಟಲಿ ಮೂಲದ ಎರಡು ಮುದ್ರಣ ಯಂತ್ರದಿಂದ ಸ್ಮಾರ್ಟ್‍ಕಾರ್ಡ್ ಪ್ರಿಂಟ್ ಮಾಡಲಾಗುತ್ತಿದ್ದು, ಶಾಂತಿನಗರದಿಂದ ಕೇಂದ್ರ ಕಛೇರಿಯಿಂದ ಸ್ಮಾರ್ಟ್ ಕಾರ್ಡ್‍ಗಳು ಎಲ್ಲ ಜಿಲ್ಲೆಗಳಿಗೆ ರವಾನೆಯಾಗಲಿವೆ ಎಂದು ಅವರು ಹೇಳಿದರು.

ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಸಿಗಲಿರುವ ಹೊಸ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದ್ದು, ಹಳೆ ಕಾರ್ಡ್‍ಗಳು ಎಂದಿನಂತೆ ಚಲಾವಣೆಯಲ್ಲಿರುತ್ತದೆ. ಆದರೆ ಅವರು ಹೊಸ ಸ್ಮಾರ್ಟ್ ಕಾರ್ಡ್ ಬಯಸಿದ್ದಲ್ಲಿ 200ರೂ. ಪಾವತಿಸಬೇಕಾಗುತ್ತದೆ. ಇನ್ನು ರೋಸ್ ಸ್ಮಾರ್ಟ್ ಸಂಸ್ಥೆ 5 ವರ್ಷಗಳ ಕಾಲ ಸ್ಮಾರ್ಟ್ ಕಾರ್ಡ್ ವಿತರಿಸುವ ಯೋಜನೆಯ ಟೆಂಡರ್‍ಅನ್ನು ಪಡೆದಿದೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News