ತೇಜಸ್ ಗೌಡ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು : ರಮೇಶ್ ಬಾಬು
ರಮೇಶ್ ಬಾಬು
ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ದುರುದ್ದೇಶಪೂರಿತ ಹಾಗೂ ಸುಳ್ಳು ಸುದ್ದಿಯ ಆರೋಪಗಳನ್ನು ಮಾಡುತ್ತಿರುವ ತೇಜಸ್ ಎ ಗೌಡ ಎಂಬ ವ್ಯಕ್ತಿಯ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲೆಗಳ ಸಮೇತ ದೂರು ದಾಖಲು ಮಾಡಿದ್ದೇನೆ ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ತಿಳಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ರಮೇಶ್ ಬಾಬು, ಸಾರ್ವಜನಿಕ ಜೀವನದಲ್ಲಿ ಸೈದ್ಧಾಂತಿಕವಾಗಿ ಎದುರಿಸಲಾಗದ ಪಲಾಯನವಾದಿಗಳು ವಾಮಮಾರ್ಗದಲ್ಲಿ ರಾಜಕೀಯ ಎದುರಾಳಿಗಳ ಮೇಲೆ ಕೆಸರು ಎರಚುವ ಪ್ರಯತ್ನ ಮಾಡುತ್ತಾರೆ ಎಂದು ಟೀಕಿಸಿದ್ದಾರೆ.
ತೇಜಸ್ ಎ. ಗೌಡ ಎಂಬ ವ್ಯಕ್ತಿ ಸುಳ್ಳು ಆರೋಪಗಳನ್ನು ಮಾಡಿ ನನ್ನ ತೇಜೋವಧೆ ಮಾಡುವ ದುರುದ್ದೇಶದಿಂದ ಮುಕ್ತಾಯಗೊಂಡಿರುವ ಪ್ರಕರಣಗಳ ಉಲ್ಲೇಖ ಮಾಡಿ ಮತ್ತು ನ್ಯಾಯಾಲಯಗಳ ಆದೇಶಕ್ಕೆ ವಿರುದ್ಧವಾಗಿ ರಾಜ್ಯಪಾಲರಿಗೆ ದೂರು ನೀಡಿ, ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇವರ ಪ್ರಯತ್ನದ ಹಿಂದೆ ಸುಳ್ಳು ದೂರುಗಳ ಮುಖಾಂತರ ಹಣ ಮಾಡುವ ದುರುದ್ದೇಶವೂ ಇರುವಂತಿದೆ. ಇಂತಹ ಸುಳ್ಳು ದೂರುಗಳ ಮೇಲೆ ಅನೇಕ ರೀತಿಯ ಟೀಕೆ ಟಿಪ್ಪಣಿಗಳು ವ್ಯಕ್ತವಾಗುತ್ತಿವೆ ಎಂದು ಅವರು ಹೇಳಿದ್ದಾರೆ.
ಇವರ ದುರುದ್ದೇಶಪೂರಿತ ಮತ್ತು ಸುಳ್ಳು ಸುದ್ದಿಯ ಆರೋಪಗಳ ಮೇಲೆ ನಾನು ಬೆಂಗಳೂರು ನಗರದ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲೆಗಳ ಸಮೇತ ದೂರು ನೀಡಿದ್ದು, ಮುಂದಿನ ಕ್ರಮಕ್ಕಾಗಿ ಪೋಲಿಸರು ದೂರನ್ನು ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಸುಳ್ಳು ಆರೋಪಗಳನ್ನು ಮಾಡಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಪಲಾಯನ ಮಾಡಲು ಸಾಧ್ಯವಿಲ್ಲ ಎಂದು ರಮೇಶ್ ಬಾಬು ತಿಳಿಸಿದ್ದಾರೆ.
ಕೆಲವರು ತೇಜೋವಧೆಯ ದುರುದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಆರೋಪಗಳ ಮೇಲೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತಿದ್ದೇನೆ. ಕಾಂಗ್ರೆಸ್ ಪಕ್ಷದ ಪರವಾಗಿ ಕಾಲ್ತುಳಿತದ ಪ್ರಕರಣದಲ್ಲಿ ಹಿಂದಿನ ಘಟನೆಗಳಿಗೆ ನಾನು ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಾಗದೆ, ಇಂತಹ ಅಪಪ್ರಚಾರಕ್ಕೆ ಕೆಲವರು ಮುಂದಾಗಿದ್ದು, ಹಿಟ್ ಅಂಡ್ ರನ್ ಮನೋಭಾವದವರಿಗೆ ಕಾನೂನಿನ ಮೂಲಕವೇ ಕ್ರಮ ಕೈಗೊಂಡು ಉತ್ತರ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಈಗಾಗಲೇ ಬೆಂಗಳೂರು ಮಹಾನಗರದ ಪೊಲೀಸ್ ಆಯುಕ್ತರಿಗೆ ಪ್ರದೇಶ ಕಾಂಗ್ರೆಸ್ ಪಕ್ಷದ ಪರವಾಗಿ ದೂರನ್ನು ನೀಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವ ಇಂತಹ ಅಪರಾಧಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೋರಲಾಗಿದೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.