ಅನಿವಾಸಿ ಕನ್ನಡಿಗರ ಕಲ್ಯಾಣಕ್ಕೆ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಲು ಪ್ರವಾಸಿ ಕೂಟ ವಿಟ್ಲ (ರಿ) ನಿಯೋಗದಿಂದ ಮನವಿ
ಬೆಂಗಳೂರು : ಅನಿವಾಸಿ ಕನ್ನಡಿಗರ ಕ್ಷೇಮಾಭಿವೃದ್ಧಿಗಾಗಿ ಮುಂದಿನ ರಾಜ್ಯ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು, ನಿವೃತ್ತ ಅನಿವಾಸಿ ಕನ್ನಡಿಗರಿಗೆ ಪಿಂಚಣಿ ಭತ್ಯೆ ನೀಡಬೇಕು ಹಾಗೂ ಸ್ವ ಉದ್ಯೋಗಕ್ಕೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರವಾಸಿ ಕೂಟ ವಿಟ್ಲ (ರಿ) ವತಿಯಿಂದ ನಿಯೋಗವೊಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಪ್ರಮುಖರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಪ್ರವಾಸಿ ಕೂಟ ವಿಟ್ಲ (ರಿ) ಅಧ್ಯಕ್ಷರಾದ ಮುಹಮ್ಮದ್ ಮಸೂದ್ ವಿಟ್ಲ (ಬಹ್ರೈನ್) ಅವರ ನೇತೃತ್ವದ ನಿಯೋಗವು ಡಿ.4ರ, ಗುರುವಾರದಂದು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಹಾಗೂ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರನ್ನು ಬೆಂಗಳೂರಿನ ಅವರ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿತು.
ನಿಯೋಗ ಮಂಡಿಸಿದ ಬೇಡಿಕೆಗಳನ್ನು ಗಮನಪೂರ್ವಕವಾಗಿ ಪರಿಶೀಲಿಸಿದ ಅವರು, ಮುಂದಿನ ರಾಜ್ಯ ಬಜೆಟ್‌ನಲ್ಲಿ ಅನಿವಾಸಿ ಕನ್ನಡಿಗರಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ಅನಿವಾಸಿಗಳಿಗಾಗಿ ಪ್ರವಾಸಿ ಕೂಟ ವಿಟ್ಲ (ರಿ) ನಡೆಸುತ್ತಿರುವ ನಿರಂತರ ಹೋರಾಟ ಹಾಗೂ ಸಮಿತಿಯ ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರವಾಸಿ ಕೂಟ ವಿಟ್ಲ (ರಿ) ಸ್ಥಾಪಕರಾದ ಹೈದರಾಲಿ ಇಸ್ಮಾಯಿಲ್ ಮೇಗಿನಪೇಟೆ (ಸೌದಿ ಅರೇಬಿಯಾ), ಮಾಧ್ಯಮ ವಕ್ತಾರ ಸಫ್ವಾನ್ ಕೋಡಪದವು (ಬಹ್ರೈನ್), ಬದ್ರುದ್ದೀನ್ (ಬಹ್ರೈನ್) ಹಾಗೂ ಕಾನೂನು ಸಲಹೆಗಾರ ಅಡ್ವಕೇಟ್ ಅನ್ಸಾರ್ ವಿಟ್ಲ ಉಪಸ್ಥಿತರಿದ್ದರು.