×
Ad

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಇಂದು(ಆ.2) ಅಪರಾಹ್ನ 2:45ಕ್ಕೆ ಶಿಕ್ಷೆ ಪ್ರಕಟಿಸಲಿರುವ ನ್ಯಾಯಾಲಯ

Update: 2025-08-02 12:31 IST

ಪ್ರಜ್ವಲ್ ರೇವಣ್ಣ

ಬೆಂಗಳೂರು: ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ಶುಕ್ರವಾರವಷ್ಟೇ ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಶಿಕ್ಷೆಯ ಪ್ರಮಾಣವನ್ನು ಇಂದು ಅಪರಾಹ್ನ 2:45ಕ್ಕೆ ಪ್ರಕಟಕಸಲಿದೆ.

ಶಿಕ್ಷೆ ಪ್ರಮಾಣ ನಿಗದಿಪಡಿಸುವ ಕುರಿತು ನ್ಯಾಯಾಧೀಶ ಸಂತೋಷ ಗಜಾನನ ಭಟ್ ಶನಿವಾರ ಬೆಳಗ್ಗೆಯಿಂದಲೇ ವಿಚಾರಣೆ ನಡೆಸಿದರು. ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಎಸ್ಪಿಪಿ ಬಿ.ಎನ್. ಜಗದೀಶ, ಅಧಿಕಾರಯುತ ಸ್ಥಾನದಲ್ಲಿದ್ದ ಪ್ರಜ್ವಲ್ ರೇವಣ್ಣ ಸಂತ್ರಸ್ತ ಮಹಿಳೆಯನ್ನು ಬೆದರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಅವಿದ್ಯಾವಂತೆಯಾಗಿದ್ದ ಆಕೆಯ ಮೇಲೆ ಪದೇಪದೆ ಅತ್ಯಾಚಾರ ನಡೆದಿದೆ. ಅಪರಾಧಿಯ ಕೈಯಲ್ಲಿ ಸಂತ್ರಸ್ತೆ ಸುಲಭದ ಬಲಿಯಾಗಿದ್ದಳು. ಆಕೆಯ ಒಪ್ಪಿಗೆಯಿಲ್ಲದೇ ಅತ್ಯಾಚಾರದ ವಿಡಿಯೋ ಸಹ ಮಾಡಿಕೊಂಡಿದ್ದರು. ಬ್ಲಾಕ್ಮೇಲ್ ಮಾಡುವ ಉದ್ದೇಶದಿಂದಲೇ, ಅಪರಾಧಿ ಪ್ರಜ್ವಲ್ ರೇವಣ್ಣ ವಿಡಿಯೋ ಮಾಡಿಕೊಂಡಿದ್ದು, ಅವುಗಳನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ವೀಡಿಯೊ ಹೊರ ಬಂದ ನಂತರ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಡಿಯೊ ಬಹಿರಂಗವಾದ ಬಳಿಕ ಆಕೆ ಹಾಗೂ ಆಕೆಯ ಕುಟುಂಬದ ಮರ್ಯಾದೆಗೆ ಧಕ್ಕೆಯಾಗಿದೆ. ಪ್ರಕರಣದಲ್ಲಿ ಸಂತ್ರಸ್ತೆ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹಿಂಸೆ ಅನುಭವಿಸಿದ್ದಳು ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ಸಾಕ್ಷ್ಯಾಧಾರದ ನಾಶಕ್ಕೆ ಪ್ರಯತ್ನಿಸಲಾಗಿದೆ. ಅಪರಾಧಿಯ ಕುಟುಂಬದವರು ಸಂತ್ರಸ್ತೆಯನ್ನೇ ಅಪಹರಿಸಿ, ತಮಗೆ ಬೇಕಾದ ರೀತಿ ಹೇಳಿಕೆ ಪಡೆದುಕೊಂಡಿದ್ದಾರೆ. ಸಂತ್ರಸ್ತೆಗೆ ಬೆದರಿಕೆಯೊಡ್ಡಿ ಸಾಕ್ಷ್ಯನಾಶಕ್ಕೆ ಯತ್ನಿಸಲಾಗಿದೆ. ಇವೆಲ್ಲವೂ ಗಂಭೀರ ಅಪರಾಧವಾಗಿದೆ. ಸಾಲದಕ್ಕೆ ಕೋರ್ಟ್ ವಿಚಾರಣೆಯನ್ನೂ ವಿಳಂಬ ಮಾಡುವ ಯತ್ನವೂ ನಡೆದಿತ್ತು. ಅಪರಾಧಿಯ ಮೇಲೆ ಮತ್ತಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಬೇರೆ ಬೇರೆ ಮಹಿಳೆಯರ ಮೇಲಿನ ಅತ್ಯಾಚಾರದ ವಿಡಿಯೊಗಳಿವೆ. ಹಣ ಅಧಿಕಾರ ಇರುವ ಇವರಿಗೆ ಕಡಿಮೆ ಶಿಕ್ಷೆಯಾಗಬಾರದು. ಅಪರಾಧಿಗೆ ಯಾವುದೇ ರೀತಿ ಕನಿಕರ ತೋರಬಾರದು. ಅಪರಾಧಿಯ ವಿಕ್ಷಿಪ್ತ ಮನಸ್ಥಿತಿ ಗಮನದಲ್ಲಿಟ್ಟುಕೊಳ್ಳಬೇಕು. ಗರಿಷ್ಠ ಪ್ರಮಾಣದ ಶಿಕ್ಷೆಯನ್ನೇ ಅಪರಾಧಿ ಪ್ರಜ್ವಲ್ ರೇವಣ್ಣಗೆ ನೀಡಬೇಕು. ಜೀವನಪರ್ಯಂತ ಸೆರೆವಾಸದ ಶಿಕ್ಷೆ ವಿಧಿಸಬೇಕು ಎಂದು ಎಸ್ಪಿಪಿ ಬಿ.ಎನ್. ಜಗದೀಶ್ ಮನವಿ ಮಾಡಿದರು.

ರಾಜಕಾರಣಿಯಾಗಿ ಕಿರಿಯ ವಯಸಿನಲ್ಲೇ ಪ್ರಜ್ವಲ್ ರೇವಣ್ಣ ಸಂಸದರಾಗಿ ಆಯ್ಕೆಯಾಗಿದ್ದರು. ಜನ ಇವರನ್ನು ಆಯ್ಕೆ ಮಾಡಿದ್ದು ಏಕೆ? ಇವರು ಮಾಡಿದ್ದೇನು? ಸಂಸದರೇ ಇಂಥ ಹೀನ ಕೃತ್ಯವೆಸಗಿದಾಗ ಗರಿಷ್ಠ ಪ್ರಮಾಣದ ಶಿಕ್ಷೆಯನ್ನೇ ವಿಧಿಸಬೇಕು. ಪ್ರಜ್ವಲ್ ಬಡವನಲ್ಲ, ಕೋಟ್ಯಾಧಿಪತಿಯಾಗಿದ್ದಾರೆ. ಆದ್ದರಿಂದ, ಸೆಕ್ಷನ್ 357ರ ಅಡಿಯಲ್ಲಿ ಹೆಚ್ಚಿನ ಮೊತ್ತದ ದಂಡ ವಿಧಿಸಿ, ಅದರ ಬಹುಭಾಗವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು. ವಿಡಿಯೊ ಬಹಿರಂಗಗೊಂಡ ಬಳಿಕ ಆಕೆ ಹೊರಗೆ ದುಡಿಯಲು ಹೋಗದಂತಾಗಿದೆ. ಆದ್ದರಿಂದ, ಗರಿಷ್ಠ ಪ್ರಮಾಣದ ಶಿಕ್ಷೆ ನೀಡಬೇಕು ಎಂದು ಪ್ರಾಸಿಕ್ಯೂಷನ್ ಪರ ವಕೀಲ ಅಶೋಕ್ ನಾಯಕ್ ವಾದ ಮಂಡಿಸಿದರು.

ಪ್ರಜ್ವಲ್ ಪರ ವಾದ ಮಂಡಿಸಿದ ವಕೀಲೆ ನಳಿನಾ ಮಾಯೇಗೌಡ, ಯುವ ಸಂಸದನಾಗಿ ಪ್ರಜ್ವಲ್ ಜನಸೇವೆ ಮಾಡಿದ್ದಾರೆ. ಹಣ ಮಾಡಬೇಕೆಂಬ ಉದ್ದೇಶದಿಂದ ರಾಜಕಾರಣಕ್ಕೆ ಬಂದವರಲ್ಲ. ಆರೋಪಿಯ ರಾಜಕೀಯ ಸ್ಥಾನಮಾನ ಶಿಕ್ಷೆಗೆ ಕಾರಣವಾಗಬಾರದು. ಇಷ್ಟು ದಿನ ಅವರು ಸಂಪಾದಿಸಿದ್ದ ಒಳ್ಳೆಯ ಹೆಸರು ಏನಾಗಬೇಕು. ಸಂತ್ರಸ್ತೆ ಸಮಾಜದಿಂದ ತಿರಸ್ಕೃತಗೊಂಡವರಲ್ಲ. ಸಂಸಾರದೊಂದಿಗೆ ಎಂದಿನಂತೆ ಜೀವನ ಸಾಗಿಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿಯೇ ವಿಡಿಯೊ ಹರಿಬಿಡಲಾಗಿದ್ದು, ಪ್ರಜ್ವಲ್ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಗಿದೆ. ಪ್ರಜ್ವಲ್ ಯುವಕನಾಗಿದ್ದು ಆತನ ಭವಿಷ್ಯವನ್ನೂ ಗಮನಿಸಬೇಕು. ಈಗಾಗಲೇ ಮಾಧ್ಯಮಗಳಲ್ಲಿ ತೇಜೋವಧೆ ಆಗಿದೆ. ವಯಸ್ಸಾದ ತಂದೆ-ತಾಯಿ ಇದ್ದಾರೆ. ಅವರ ತಾತ ಮಾಜಿ ಪ್ರಧಾನಿಯಾಗಿದ್ದಾರೆ. ನ್ಯಾಯಾಲಯ ವಿಧಿಸುವ ಶಿಕ್ಷೆಯಿಂದ ಪ್ರಜ್ವಲ್ ಅವರ ಭವಿಷ್ಯಕ್ಕೆ ಹಾನಿಯಾಗಬಾರದು ಎಂದು ಮನವಿ ಮಾಡಿದರು.

ಈ ವೇಳೆ ನ್ಯಾಯಾಧೀಶರು ಪ್ರಜ್ವಲ್ ಅವರನ್ನು ಕುರಿತು, ನೀವೇನಾದರೂ ಹೇಳಲು ಬಯಸುವಿರೇ ಎಂದು ಪ್ರಶ್ನಿಸಿದರು. ಅದಕ್ಕೆ ಕಣ್ಣೀರಿಡುತ್ತಲೇ ಪ್ರತಿಕ್ರಿಯಿಸಿದ ಪ್ರಜ್ವಲ್, ನಾನು ಹಲವು ಮಹಿಳೆಯರೊಂದಿಗೆ ಈ ಕೃತ್ಯವೆಸಗಿದ್ದೇನೆ ಎಂದು ಆರೋಪಿಸಲಾಗುತ್ತಿದೆ. ನಾನು ಸಂಸದನಾದಾಗ ಯಾರೂ ಇಂಥ ಆರೋಪ ಮಾಡಿಲ್ಲ. ರೇಪ್ ಮಾಡಿದ್ದೇನೆಂದು ಯಾರೂ ಹೇಳಿಲ್ಲ. ಪೊಲೀಸರು ಈ ಕೆಲಸ ಮಾಡಿದ್ದಾರೆ. ಆರು ತಿಂಗಳಿಂದ ತಂದೆ-ತಾಯಿಯನ್ನು ನೋಡಿಲ್ಲ. ನಾನು ಮಾಡಿದ ಒಂದೇ ತಪ್ಪೇನೆಂದರೆ ರಾಜಕೀಯದಲ್ಲಿ ಬೇಗ ಬೆಳೆದದ್ದು. ಈ ವಿಚಾರದಲ್ಲಿ ಮಾಧ್ಯಮಗಳನ್ನೂ ದೂರುವುದಿಲ್ಲ. ಕೋರ್ಟ್ ಆದೇಶಕ್ಕೆ ತಲೆ ಬಾಗುತ್ತೇನೆ ಎಂದು ನುಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಇಂದು ಅಪರಾಹ್ನ 2:45ಕ್ಕೆ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News