ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ಹೊಣೆ ಹೊತ್ತು ರಾಜೀನಾಮೆ ನೀಡಬೇಕು : ಆರ್.ಅಶೋಕ್
ಬೆಂಗಳೂರು : ಈ ಬಾರಿ ಐಪಿಎಲ್ ಕಪ್ ನಮ್ದೇ. ಆದರೆ, ಸಾವಿನ ತಪ್ಪು ಯಾರದೆಂದು ರಾಜ್ಯದ ಏಳು ಕೋಟಿ ಜನರು ಕೇಳುತ್ತಿದ್ದಾರೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 11 ಜನರ ಸಾವು ದುಃಖಕರ ಸಂಗತಿ. ಆದರೆ, ಸತ್ತದ್ದಕ್ಕೆ ಯಾರ ಮೇಲೆ ಎಫ್‍ಐಆರ್ ಹಾಕಿದ್ದೀರಿ ಎಂದು ಪ್ರಶ್ನೆ ಮಾಡಿದರು.
ಮಂಗಳವಾರ ರಾತ್ರಿ ಕ್ರಿಕೆಟ್ ಪಂದ್ಯ ಮುಗಿದರೂ ಬುಧವಾರ ಬೆಳಗಿನ ಜಾವ 3 ಗಂಟೆಯ ವರೆಗು ಪೊಲೀಸರು ನಿದ್ದೆ ಇಲ್ಲದೆ ಕೆಲಸ ಮಾಡಿದ್ದಾರೆ. ರಾಜ್ಯ ಸರಕಾರಕ್ಕೆ ಕನಿಷ್ಠ ಜ್ಞಾನವೇ ಇಲ್ಲ, ಅದೇ ಪೊಲೀಸರನ್ನು ಬಂದೋಬಸ್ತಿಗೆ ನಿಯೋಜಿಸಿದರೆ ಹೇಗೆ ಎಂದು ಪ್ರಶ್ನಿಸಿದರು.
ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ಪೊಲೀಸರು ನಿರಾಕರಿಸಿದರು. ಬಲತ್ಕಾರದಿಂದ ಅವರ ಮೇಲೆ ಒತ್ತಡತಂದು ಕಾರ್ಯಕ್ರಮ ಮಾಡಿದ್ದಾರೆ. ಹೈಕೋಟ್ ವಿಧಾನಸೌಧದ ಸುತ್ತಮುತ್ತ ನಿಷೇಧಿತ ಪ್ರದೇಶವಿದ್ದರೂ ಡ್ರೋನ್ ಬಳಕೆ ಮಾಡಲಾಗಿದೆ. ಹೈಕೋರ್ಟ್ ಕೂಡ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಇಷ್ಟಾದರೂ ಇಷ್ಟೊಂದು ಜನ ಸೇರುತ್ತಾರೆ ಎಂದು ನಿರೀಕ್ಷಿಸಿರಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆಂದು ಅಶೋಕ್ ವಾಗ್ದಾಳಿ ನಡೆಸಿದರು.
ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಈ ದುರಂತಕ್ಕೆ ಪೊಲೀಸರು, ಸರಕಾರ ಕಾರಣ ಅಲ್ಲವಾದರೆ ಇನ್ಯಾರು ಕಾರಣ ಎಂದು ಜನಕ್ಕೆ ತಿಳಿಸಬೇಕಾಗಿದೆ. ಜತೆಗೆ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನೇರ ಹೊಣೆ ಹೊತ್ತು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.