LIC ವ್ಯವಸ್ಥಾಪಕ ನಿರ್ದೇಶಕರಾಗಿ ರತ್ನಾಕರ್ ಪಟ್ನಾಯಕ್ ಅಧಿಕಾರ ಸ್ವೀಕಾರ
ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮ(LIC)ದ ವ್ಯವಸ್ಥಾಪಕ ನಿರ್ದೇಶಕರಾಗಿ ಪದೋನ್ನತಿಗೊಂಡ ರತ್ನಾಕರ್ ಪಟ್ನಾಯಕ್ ಅವರು ಜೂನ್ 1ರಂದು ಅಧಿಕಾರ ಸ್ವೀಕರಿಸಿದರು. ಮೇ 14ರಂದು ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಸರಕಾರ, ರತ್ನಾಕರ್ ಪಟ್ನಾಯಕ್ ಅವರನ್ನು ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿತ್ತು.
1968ರಲ್ಲಿ ಜನಿಸಿದ ರತ್ನಾಕರ್ ಪಟ್ನಾಯಕ್, ಮಾರ್ಚ್ 1990ರಲ್ಲಿ ಭಾರತೀಯ ಜೀವ ವಿಮಾ ಸಂಸ್ಥೆಯನ್ನು ನೇರ ನೇಮಕಾತಿ ಅಧಿಕಾರಿಯಾಗಿ ಸೇರ್ಪಡೆಯಾಗಿದ್ದರು. ಅವರು ಭೌತಶಾಸ್ತ್ರ (ಆನರ್ಸ್) ಪದವೀಧರರಾಗಿದ್ದು, ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಭಾರತೀಯ ವಿಮಾ ನಿಗಮ ಸಂಸ್ಥೆಯ ಫೆಲೊ ಸದಸ್ಯರಾಗಿದ್ದು, ಆರೋಗ್ಯ ವಿಮೆ ಡಿಪ್ಲೊಮಾ ಪದವಿಯನ್ನೂ ಹೊಂದಿದ್ದಾರೆ. ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗುವುದಕ್ಕೂ ಮುನ್ನ, ಅವರು ಅದೇ ಸಂಸ್ಥೆಯಲ್ಲಿ ಕಾರ್ಯಕಾರಿ ನಿರ್ದೇಶಕ (ಹೂಡಿಕೆ ಫ್ರಂಟ್ ಆಫೀಸ್) ಹಾಗೂ ಮುಖ್ಯ ಹೂಡಿಕೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
35 ವರ್ಷಗಳ ಕಾಲ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿರುವ ರತ್ನಾಕರ್ ಪಟ್ನಾಯಕ್, ತಮ್ಮ ಸೇವಾವಧಿಯಲ್ಲಿ ದೇಶಾದ್ಯಂತ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ಅವರು ಇದಕ್ಕೂ ಮುನ್ನ, ಇಂದೋರ್ ಹಾಗೂ ಜಮ್‌ಶೇಡ್‌ಪುರ್ ವಿಭಾಗಗಳಲ್ಲಿ ಹಿರಿಯ ವಿಭಾಗೀಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು. ಇದರೊಂದಿಗೆ, ಪೂರ್ವ ವಲಯದ ಪ್ರಾದೇಶಿಕ ವ್ಯವಸ್ಥಾಪಕ(ಮಾರುಕಟ್ಟೆ/ಸಿಎಲ್ಐಎ)ರಾಗಿಯೂ ಸೇವೆ ಸಲ್ಲಿಸಿದ್ದರು.
ಮಾರುಕಟ್ಟೆ, ಗ್ರಾಹಕ ಸೇವೆಗಳು ಹಾಗೂ ಹೂಡಿಕೆ ವಲಯಗಳಲ್ಲಿ ಅವರು ವಿವಿಧ ದರ್ಜೆಯ ಅಧಿಕಾರಿಯಾಗಿ ಹಲವು ವರ್ಷಗಳ ಸೇವಾನುಭವವನ್ನೂ ಹೊಂದಿದ್ದಾರೆ.