×
Ad

ವಂಚನೆ ಆರೋಪ | ನಟ ಕಿಚ್ಚ ಸುದೀಪ್ ಸಹಿತ ಇಬ್ಬರ ವಿರುದ್ಧ ಪೊಲೀಸರಿಗೆ ದೂರು

Update: 2026-01-20 23:52 IST

ಬೆಂಗಳೂರು : ವಂಚನೆ ಆರೋಪದ ಮೇಲೆ ನಟ ಕಿಚ್ಚಸುದೀಪ್ ಮತ್ತು ಅವರ ವ್ಯವಸ್ಥಾಪಕ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಚಿಕ್ಕಮಗಳೂರು ಮೂಲದ, ಕಾಫಿ ತೋಟದ ಮಾಲಕ ದೀಪಕ್ ಮಯೂರ್ ಪಟೇಲ್ ಎಂಬುವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮಂಗಳವಾರ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ..?:

2018ರಲ್ಲಿ ನಟ ಕಿಚ್ಚ ಸುದೀಪ್ ಅವರ ನಿರ್ಮಾಣ ಸಂಸ್ಥೆ ‘ಕಿಚ್ಚ ಕ್ರಿಯೇಷನ್ಸ್’ನಿಂದ ‘ವಾರಸ್ದಾರ’ ಎಂಬ ಧಾರಾವಾಹಿಯನ್ನು ನಿರ್ಮಿಸಲಾಗಿತ್ತು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯ ಚಿತ್ರೀಕರಣವನ್ನು ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದಲ್ಲಿ ನಡೆಸಲಾಗಿತ್ತು. ಇದಕ್ಕಾಗಿ ದೀಪಕ್ ಮಯೂರ್ ಅವರ ಮನೆ ಹಾಗೂ ಕಾಫಿ ತೋಟವನ್ನು ಬಾಡಿಗೆಗೆ ಪಡೆಯಲಾಗಿತ್ತು. ಆದರೆ, ಹಣ ನೀಡಿಲ್ಲ ಎಂದು ದೀಪಕ್ ದೂರಿದ್ದಾರೆ.

‘ವಾರಸ್ದಾರ’ ಧಾರಾವಾಹಿ ಚಿತ್ರೀಕರಣಕ್ಕಾಗಿ ತಮ್ಮ ಕಾಫಿ ತೋಟ ಮತ್ತು ಮನೆಯನ್ನು ಎರಡು ವರ್ಷಗಳಿಗೆ ಅಗ್ರಿಮೆಂಟ್ ಮಾಡಿಸಿ ಬಾಡಿಗೆಗೆ ಪಡೆದುಕೊಂಡಿದ್ದರು. ಆದರೆ, ಕೇವಲ ಎರಡೇ ತಿಂಗಳಿಗೆ ಜಾಗ ಖಾಲಿ ಮಾಡಿದ್ದು, ಹಣ ನೀಡಿಲ್ಲ ಎಂದು ದೀಪಕ್ ಆರೋಪಿಸಿದ್ದಾರೆ.

ಈ ಎರಡು ತಿಂಗಳ ಅವಧಿಯ ಚಿತ್ರೀಕರಣದ ನೆಪದಲ್ಲಿ ತಮ್ಮ ತೋಟದಲ್ಲಿ ಕಾಫಿ ಗಿಡಗಳು ಹಾಗೂ ಮರಗಳನ್ನು ನಾಶ ಮಾಡಿದ್ದಾರೆ. ಹೀಗಾಗಿ ತಮಗೆ ನಷ್ಟವಾಗಿದ್ದು, 95 ಲಕ್ಷ ಪರಿಹಾರ ನೀಡುವಂತೆ ಕೇಳಿದ್ದೆ. ಈ ವೇಳೆ ಸುದೀಪ್ ಅವರು 60 ಲಕ್ಷ ನೀಡುವುದಾಗಿ ಭರವಸೆ ನೀಡಿ ರಾಜಿ ಮಾಡಿಕೊಂಡಿದ್ದರು ಎಂದು ದೀಪಕ್ ತಿಳಿಸಿದ್ದಾರೆ.

ಅದರೆ, ಆದರೆ ಇದುವರೆಗೆ ತಮಗೆ 10 ಲಕ್ಷ ರೂಪಾಯಿಯ ಚೆಕ್ ಮಾತ್ರವೇ ಬಂದಿದೆ. ಬಾಕಿ ಹಣ ನೀಡದೆ ಸತಾಯಿಸುತ್ತಿದ್ದು ನಟ ಸುದೀಪ್ ಹಾಗೂ ಚಕ್ರವರ್ತಿ ಚಂದ್ರಚೂಡ್ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ತಮಗೆ ಪರಿಹಾರ ಕೊಡಿಸಬೇಕು ಎಂದು ದೀಪಕ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News