×
Ad

ಶಾಲೆಗಳ ಅಡುಗೆ ಮನೆ ಆಧುನೀಕರಣ | ಪಾತ್ರೆ-ಪರಿಕರಗಳ ಖರೀದಿಗಾಗಿ 18.91 ಕೋಟಿ ರೂ.ಬಿಡುಗಡೆ

Update: 2026-01-20 22:52 IST
ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ಸರಕಾರವು ರಾಜ್ಯದ 9,090 ಶಾಲೆಗಳ ಅಡುಗೆ ಮನೆಗಳನ್ನು ಆಧುನೀಕರಿಸಲು ಹಾಗೂ ಹೊಸ ಪಾತ್ರೆ-ಪರಿಕರಗಳನ್ನು ಒದಗಿಸಲು ಒಟ್ಟು 18.91 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿ, ಮಂಗಳವಾರದಂದು ಆದೇಶ ಹೊರಡಿಸಿದೆ.

ಬೆಂಗಳೂರು ನಗರ ಮತ್ತು ಧಾರವಾಡ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 16 ಜಿಲ್ಲೆಗಳ 7,015 ಶಾಲೆಗಳಲ್ಲಿ ಅಕ್ಕಿ ಬೇಯಿಸಲು ಮತ್ತು ತೊಗರಿಬೇಳೆ ಸಾಂಬಾರು ತಯಾರಿಸಲು ಸ್ಟೀಲ್ ಪಾತ್ರೆಗಳನ್ನು ಒದಗಿಸಲು 12.56 ಕೋಟಿ ರೂ.ಗಳನ್ನು ಹಾಗೂ ಬೆಂಗಳೂರು ನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿನ 2075 ಶಾಲೆಗಳಿಗೆ ಮೊಟ್ಟೆ ಬೇಯಿಸಲು ಸ್ಟೀಲ್ ಪಾತ್ರೆಗಳು, ಎಲ್.ಪಿ.ಜಿ. ಸಿಲಿಂಡರ್‍ಗಳನ್ನು ಒದಗಿಸಲು 6.35 ಕೋಟಿ ರೂ.ಗಳನ್ನು ಒಳಗೊಂಡಂತೆ ಒಟ್ಟಾರೆ 18.91 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.

ಇಸ್ಕಾನ್ ಸಂಸ್ಥೆ ಹಾಗೂ ಅದಮ್ಯ ಚೇತನ ಸಂಸ್ಥೆಯಿಂದ ಮಧ್ಯಾಹ್ನದ ಬಿಸಿಯೂಟ ಸರಬರಾಜು ಮಾಡುತ್ತಿರುವ ಶಾಲೆಗಳಿಗೆ, ಒಂದು ವೇಳೆ ಸಂಸ್ಥೆಗಳು ಮೊಟ್ಟೆಯನ್ನು ಸರಬರಾಜು ಮಾಡಲು ನಿರಾಕರಿಸಿದರೆ ಮಾತ್ರ, ಅಂತಹ ಶಾಲೆಗಳಲ್ಲಿ ಮೊಟ್ಟೆ ಬೇಯಿಸಲು ಅಗತ್ಯವಿರುವ ಪಾತ್ರೆ ಪರಿಕರಗಳನ್ನು ಮತ್ತು ಇತರೆ ಸಾಮಗ್ರಿಗಳನ್ನು ಖರೀದಿಸಲು ಅಗತ್ಯವಿರುವ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು.

ಅನುದಾನ ಬಿಡುಗಡೆ ವಿವರಗಳನ್ನು ಹಾಗೂ ವೆಚ್ಚದ ವಿವರಗಳನ್ನು 15 ದಿನಗಳೊಳಗಾಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಲ್ಲಿಸಬೇಕು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಇಲಾಖಾ ವೆಬ್ ಸೈಟ್‍ನಲ್ಲಿ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News