ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಿತ ಶಾಸಕರ ಸಂಖ್ಯೆ ಉಲ್ಬಣ : ರವಿಕುಮಾರ್
ಬೆಂಗಳೂರು : ರಾಜ್ಯ ಸರಕಾರವು ಅಭಿವೃದ್ಧಿ ಶೂನ್ಯವಾಗುತ್ತಿದೆ. ಹೀಗಾಗಿ ಆಡಳಿತ ಪಕ್ಷದ ಅಸಮಾಧಾನಿತ ಶಾಸಕರ ಸಂಖ್ಯೆ ಉಲ್ಬಣವಾಗುತ್ತಿದೆ ಎಂಬುದಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಬೆಂಗಳೂರಿಗೆ ಧಾವಿಸಿ ಬಂದುದು ಸಾಕ್ಷೀಕರಿಸುತ್ತದೆ ಎಂದು ಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಟೀಕಿಸಿದ್ದಾರೆ.
ಸೋಮವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಶಾಸಕರಾದ ಬಿ.ಆರ್.ಪಾಟೀಲ್, ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ.. ಹೀಗೆ ಅನೇಕರನ್ನು ಕರೆದಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಅಭಿವೃದ್ಧಿ ಆಗುತ್ತಿಲ್ಲ, ತಮಗೆ ಅನುದಾನ ಸಿಗುತ್ತಿಲ್ಲ, ನಾವು ಕ್ಷೇತ್ರದಲ್ಲಿ ಮುಖ ಇಟ್ಟುಕೊಂಡು ಓಡಾಡುವುದು ಹೇಗೆ? ಜನರಿಗೆ ಏನು ಉತ್ತರ ಕೊಡಬೇಕೆಂದು ಪ್ರಶ್ನಿಸಿದ್ದಾರೆ ಎಂದು ಹೇಳಿದರು.
ಈ ಸಂಖ್ಯೆ ಹೆಚ್ಚಾಗಲಿದೆ ಎಂಬುದಕ್ಕಾಗಿ ಸುರ್ಜೇವಾಲಾ ಧಾವಿಸಿ ಬಂದಿದ್ದಾರೆ. ತಮ್ಮ ಶಾಸಕರ ಅಹವಾಲು ಶಮನ ಮಾಡಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿಫಲವಾಗಿದ್ದಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ. ಅದಕ್ಕಾಗಿ ಇಂದು ಸುರ್ಜೇವಾಲಾ ಬಂದಿದ್ದಾರೆ. ನಾಳೆ ರಾಹುಲ್ ಗಾಂಧಿ ಬರಬೇಕಾಗಬಹುದು ಎಂದು ಅವರು ಟೀಕಿಸಿದರು.
ಕಾಡಿಗೂ ರಕ್ಷಣೆ ಇಲ್ಲ: ರಾಜ್ಯದಲ್ಲಿ ಮಹಿಳೆಯರು, ಜನರಿಗೆ ರಕ್ಷಣೆ ಇಲ್ಲ. ಎಲ್ಲಿ ಬೇಕಾದರೆ ಅಲ್ಲಿ ಅತ್ಯಾಚಾರ ನಡೆಯುತ್ತಿದೆ. ಬೆಂಗಳೂರಿನಲ್ಲಿ ಮಹಿಳೆ ಹತ್ಯೆ ಮಾಡಿ ಬಿಬಿಎಂಪಿ ಕಸದ ಲಾರಿಗೆ ತುಂಬಿದ್ದಾರೆ. ಕಾನೂನು ಸುವ್ಯವಸ್ಥೆ ಎಕ್ಕುಟ್ಟು ಹೋಗಿದೆ ಎಂಬುದಕ್ಕೆ ಇದೇ ಉದಾಹರಣೆ ಎಂದು ಎನ್.ರವಿಕುಮಾರ್ ಆರೋಪಿಸಿದರು.
ಆನೆಗಳನ್ನು ಕೊಲ್ಲುತ್ತಿದ್ದಾರೆ. ಜಿಂಕೆ ಹತ್ಯೆ, ವಿಷವಿಟ್ಟು ಹುಲಿಗಳ ಹತ್ಯೆ ನಡೆಯುತ್ತಿದೆ. ಧ್ವನಿ ಇಲ್ಲದ ಪ್ರಾಣಿಗಳನ್ನೂ ಬಿಡುತ್ತಿಲ್ಲ. ರಾಜ್ಯದ ನಾಡಿಗೂ-ಕಾಡಿಗೂ ರಕ್ಷಣೆ ಇಲ್ಲ ಎಂದು ಆಕ್ಷೇಪಿಸಿದ ಅವರು, ಸಿದ್ದರಾಮಯ್ಯರ ಸರಕಾರ ಕೂಡಲೇ ತೊಲಗುವುದು ಒಳ್ಳೆಯದೆಂದು ಜನರು ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.