×
Ad

ರೇಣುಕಾಸ್ವಾಮಿ ಕೊಲೆ ಪ್ರಕರಣ | ಬಳ್ಳಾರಿ ಜೈಲಿಗೆ ದರ್ಶನ್ ಸ್ಥಳಾಂತರಕ್ಕೆ ಕೋರಿದ್ದ ಅರ್ಜಿ ವಜಾ

ʼವಿಷ ಕೊಡಿʼ ಎಂದಿದ್ದ ದರ್ಶನ್; ನ್ಯಾಯಾಧೀಶರ ಪ್ರತಿಕ್ರಿಯೆ ಏನು?

Update: 2025-09-09 16:03 IST

ದರ್ಶನ್ | ರೇಣುಕಸ್ವಾಮಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಲು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಮಾಡಿದ್ದ ಮನವಿಯನ್ನು ತಿರಸ್ಕರಿಸಿರುವ ಬೆಂಗಳೂರಿನ ಸೆಷನ್ಸ್ ಕೋರ್ಟ್, ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಸಕಾರಣಗಳಿಲ್ಲ ಎಂದು ತಿಳಿಸಿದೆ.

ಇದೇ ವೇಳೆ, ಜೈಲಿನಲ್ಲಿ ಕನಿಷ್ಠ ಸೌಲಭ್ಯ ಒದಗಿಸಬೇಕೆಂಬ ದರ್ಶನ್ ಮನವಿ ಮಾನ್ಯ ಮಾಡಿರುವ ನ್ಯಾಯಾಲಯ, ಕಾರಾಗೃಹದ ನಿಯಮಗಳ ಅನುಸಾರ ಯಾವೆಲ್ಲ ಕನಿಷ್ಠ ಸೌಲಭ್ಯಗಳು ಇವೆಯೋ ಅವೆಲ್ಲವನ್ನೂ ಒದಗಿಸಬೇಕು ಎಂದು ಜೈಲು ಅಧಿಕಾರಿಗಳಿಗೆ ಸೂಚಿಸಿದೆ.

ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಹಾಗೂ ಇತರ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕಾರಾಗೃಹಗಳಿಗೆ ಸ್ಥಳಾಂತರಿಸಲು ಕೋರಿ ಜೈಲು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ಹಾಗೂ ಜೈಲಿನಲ್ಲಿ ಹಾಸಿಗೆ, ದಿಂಬು, ಹೊದಿಕೆ ಒದಗಿಸಲು ಮನವಿ ಮಾಡಿ ದರ್ಶನ್ ಸಲ್ಲಿಸಿದ್ದ ಅರ್ಜಿಗಳ ಕುರಿತು ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ಬೆಂಗಳೂರಿನ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಐ.ಪಿ. ನಾಯ್ಕ್ ಮಂಗಳವಾರ ಪ್ರಕಟಿಸಿದರು.

ಆರೋಪಿಗಳನ್ನು ಪರಪ್ಪನ ಅಗ್ರಹಾರದಿಂದ ಬೇರೆ ಜೈಲುಗಳಿಗೆ ಸ್ಥಳಾಂತರಗೊಳಿಸುವಂತೆ ಕೋರಿ ಜೈಲು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಾಸಿಗೆ, ದಿಂಬು ಹಾಗೂ ಬೆಡ್ ಶೀಟ್ ನೀಡಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದೆ.

ವಿಷ ಕೊಡಿ ಎಂದಿದ್ದ ದರ್ಶನ್:

ಬೆಳಗಿನ ಕಲಾಪದ ಅವಧಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ನಟ ದರ್ಶನ್ ನ್ಯಾಯಾಧೀಶರ ಬಳಿ ತಮ್ಮದೊಂದು ಮನವಿ ಇದೆ ಎಂದು ತಿಳಿಸಿದ್ದರು.

ಅದೇನೆಂದು ನ್ಯಾಯಾಧೀಶರು ಕೇಳಿದಾಗ, “ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ, ನನಗೆ ಮಾತ್ರ ವಿಷ ನೀಡಲಿ. ಕೋರ್ಟ್​​ನಿಂದಲೇ ಈ ಆದೇಶ ನೀಡಬೇಕು” ಎಂದು ಮನವಿ ಮಾಡಿದ್ದರು.

ಇದನ್ನು ಕೇಳಿದ್ದ ನ್ಯಾಯಾಧೀಶರು, “ನೀವು ಹಾಗೆಲ್ಲ ಹೇಳುವಂತಿಲ್ಲ. ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ನೀಡುತ್ತೇವೆ. ನಿಮ್ಮ ಮನವಿ ಬಗ್ಗೆ ಮಧ್ಯಾಹ್ನ ಆದೇಶ ನೀಡುತ್ತೇವೆ” ಎಂದು ತಿಳಿಸಿ, ಪ್ರಕರಣವನ್ನು ಮಧ್ಯಾಹ್ನಕ್ಕೆ ಮುಂದೂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News