×
Ad

ಬೆಂಗಳೂರಿನ ಸಮಗ್ರ ಅಭಿವೃದ್ಧಿ | ನಾಗರಿಕರಿಂದ ಸಲಹೆ ಪಡೆದು ಅಳವಡಿಕೆ : ರಿಝ್ವಾನ್ ಅರ್ಶದ್

Update: 2025-02-11 23:14 IST

ಬೆಂಗಳೂರು : ನಗರದ ಹಿತದೃಷ್ಟಿಯನ್ನು ಕಾಯುವ ನಿಟ್ಟಿನಲ್ಲಿ ನಾಗರಿಕರಿಂದ ಸಲಹೆಗಳನ್ನು ಪಡೆದು, ಉತ್ತಮ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ರಿಝ್ವಾನ್ ಅರ್ಶದ್ ತಿಳಿಸಿದ್ದಾರೆ.

ಮಂಗಳವಾರ ಇಲ್ಲಿನ ನಗರದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಆಯೋಜಿಸಿದ್ದ ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯ ಸ್ವೀಕರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದಲ್ಲಿ ಸದ್ಯ ಇರುವ ಯಾವುದೇ ಕಾನೂನು, ಕಾಯ್ದೆಗಳಿಗೆ ಬೆಲೆ ಕೊಡುವವರಿಲ್ಲ. ಆದುದರಿಂದ ಉತ್ತಮ ಆಡಳಿತ ನಡೆಸುವ ಸಲುವಾಗಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಜಾರಿ ತರಲಾಗುತ್ತಿದೆ. ಜನರಿಗೆ ಯಾವ ಸೌಲಭ್ಯಗಳನ್ನು ನೀಡಬೇಕು, ಯಾವ ರೀತಿ ಆಡಳಿತವನ್ನು ನಡೆಸಬೇಕು ಎಂಬುದರ ಕುರಿತು ಹಲವಾರು ಆಯಾಮಗಳಲ್ಲಿ ಅಧ್ಯಯನ ನಡೆಸಿ ಅದನ್ನು ಜಾರಿಗೆ ತರಲು ಮುಂದಾಗಲಾಗುತ್ತಿದೆ ಎಂದು ಅವರು ಹೇಳಿದರು.

ನಾಗರಿಕರಿಗೆ ಸಿಗಬೇಕಾದಂತಹ ಮೂಲಭೂತ ಸೌಕರ್ಯಗಳನ್ನು ನ್ಯಾಯಬದ್ದವಾಗಿ ಜನರಿಗೆ ಸರಿಯಾದ ಪದ್ದತಿಯಲ್ಲಿ ತಲುಪಿಸುವ ವ್ಯವಸ್ಥೆಯಲ್ಲಿ ಇಂದು ನಾವಿಲ್ಲ. ಅದಕ್ಕಾಗಿ ಆಡಳಿತ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಮುಂದಾಗಬೇಕಾಗಿದೆ ಎಂದು ಅವರು ತಿಳಿಸಿದರು.

ನಗರದ ಹಿತದೃಷ್ಟಿಯನ್ನು ಕಾಯುವ ನಾಗರಿಕರಿಂದ ಸಲಹೆಗಳನ್ನು ಪಡೆದು, ಅತ್ಯಮೂಲ್ಯವಾದ ಅಂಶಗಳನ್ನು ವಿಧೇಯಕದಲ್ಲಿ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದು. ಬೇರೆ ಬೇರೆ ರಾಜ್ಯ, ದೇಶಗಳ ಆಡಳಿತವನ್ನು ನಾವು ಅಧ್ಯಯನ ಮಾಡಿಯೇ ಈ ವಿಧೇಯಕವನ್ನು ತರಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಕೃಷ್ಣಪ್ಪ, ರವಿ ಸುಬ್ರಮಣ್ಯ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬೆಂಗಳೂರು ನಗರದ ಆಡಳಿತಕ್ಕೆ ಹೊಸ ಸ್ವರೂಪ ನೀಡಬೇಕು. ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರಾಗಿದ್ದು, ಈಗಾಗಲೇ 1.50 ಕೋಟಿ ಜನಸಂಖ್ಯೆ ವಾಸವಿದ್ದಾರೆ. ಇದರ ಜೊತೆಗೆ 1 ಕೋಟಿಗೂ ಹೆಚ್ಚು ವಾಹನಗಳಿವೆ. ಇದರಿಂದ ನಗರದ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಎಲ್ಲರಿಗೂ ಸೌಕರ್ಯಗಳನ್ನು ಕಲ್ಪಿಸಲು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಡಿ ಪಾಲಿಕೆಗಳನ್ನಾಗಿ ಮರು ವಿಂಗಡಣೆ ಮಾಡಿ ಅಲ್ಲಿಯೇ ಸಂಪೂರ್ಣ ಅಧಿಕಾರ ನೀಡಲು ಮುಂದಾಗಲಾಗುತ್ತಿದೆ.

-ರಿಝ್ವಾನ್ ಅರ್ಶದ್, ಶಾಸಕ

ಇ-ಮೇಲ್ ಮೂಲಕ ಸಲಹೆಗಳನ್ನು ನೀಡಿ: ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಸಾರ್ವಜನಿಕರು/ಸಂಘ ಸಂಸ್ಥೆಗಳು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಇ-ಮೇಲ್ ಆದ gbasuggestiiob@gmail.com ಮೂಲಕವೂ ಕಳುಹಿಸಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News