×
Ad

ಎಟಿಎಂ ಹಣ ದರೋಡೆ ಪ್ರಕರಣ : ಮತ್ತಿಬ್ಬರ ಬಂಧನ, ಬಂಧಿತರ ಸಂಖ್ಯೆ 9ಕ್ಕೆ ಏರಿಕೆ

Update: 2025-11-24 20:47 IST

Photo credit: PTI

ಬೆಂಗಳೂರು : ಎಟಿಎಂ ಯಂತ್ರಗಳಿಗೆ ತುಂಬಿಸಲು ಕೊಂಡೊಯ್ಯುತ್ತಿದ್ದ 7.11 ಕೋಟಿ ರೂ. ಹಣ ದರೋಡೆ ಪ್ರಕರಣದ ಮತ್ತಿಬ್ಬರು ಆರೋಪಿಗಳನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಚೆನ್ನೈನಲ್ಲಿದ್ದ ದಿನೇಶ್ ಹಾಗೂ ಜಿನೇಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಇದಕ್ಕೂ ಮೊದಲು ಸಿಎಂಎಸ್ ಏಜೆನ್ಸಿ ವಾಹನದ ಮೇಲ್ವಿಚಾರಕ ಗೋಪಾಲ್ ಪ್ರಸಾದ್, ಮಾಜಿ ಉದ್ಯೋಗಿ ಕ್ಸೇವಿಯರ್, ಗೋವಿಂದಪುರ ಠಾಣೆಯ ಕಾನ್‍ಸ್ಟೇಬಲ್ ಅಣ್ಣಪ್ಪ ನಾಯ್ಕ್, ಕೃತ್ಯಕ್ಕೆ ಸಾಥ್ ನೀಡಿದ್ದ ನವೀನ್, ನೆಲ್ಸನ್, ರವಿ ಹಾಗೂ ರಾಕೇಶ್ ಎಂಬುವರನ್ನು ಬಂಧಿಸಲಾಗಿತ್ತು.

ಈ ಪ್ರಕರಣದ ಬಗ್ಗೆ ಸೋಮವಾರ ನಗರದ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಪ್ರಕರಣದಲ್ಲಿ ಒಟ್ಟು 6.29 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದ್ದು, ಉಳಿದ 82 ಲಕ್ಷ ಹಣಕ್ಕಾಗಿ ಶೋಧ ನಡೆಸುತ್ತಿದೆ. ಕೊನೆಯದಾಗಿ ಬಂಧಿತರಾಗಿರುವ ಇಬ್ಬರು ಆರೋಪಿಗಳ ಬಳಿ ಯಾವುದೇ ಹಣ ಪತ್ತೆಯಾಗಿಲ್ಲ. ಬೇರೆ ಎಲ್ಲಿ ಹಣ ಇಟ್ಟಿರುವುದಾಗಿ ಆರೋಪಿಗಳು ಬಾಯ್ಬಿಡುತ್ತಿದ್ದು, ಇನ್ನುಳಿದ ಹಣವನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ. ಇನ್ನು, ಪ್ರಕರಣದ ಎಲ್ಲ ಪ್ರಮುಖ ಆರೋಪಿಗಳನ್ನು ಬಂಧಿಸಿದಂತಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ : ಎಟಿಎಂ ಯಂತ್ರಗಳಿಗೆ ತುಂಬಿಸಬೇಕಿದ್ದ 7.11 ಕೋಟಿ ರೂ. ಹಣವನ್ನು ಹಾಡಹಗಲೇ ದೋಚಿರುವ ಘಟನೆ ನವೆಂಬರ್ 19ರಂದು ಬೆಂಗಳೂರಿನ ಡೈರಿ ಸರ್ಕಲ್ ಮೇಲ್ಸೇತುವೆ ಬಳಿ ನಡೆದಿತ್ತು. ಆರ್‍ಬಿಐ ಅಧಿಕಾರಿಗಳ ಸೋಗಿನಲ್ಲಿ ಕಾರಿನಲ್ಲಿ ಬಂದಿದ್ದ ಆರೋಪಿಗಳ ಗುಂಪು ಎಟಿಎಂಗಳಿಗೆ ಹಣ ತುಂಬಿಸುವ ಕಸ್ಟೋಡಿಯನ್ ಕಂಪೆನಿಯ ವಾಹನವನ್ನು ತಡೆದು ಹಣದ ಪೆಟ್ಟಿಗೆಯನ್ನು ದೋಚಿಕೊಂಡು ಪರಾರಿಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News