ರೌಡಿಶೀಟರ್ ಹತ್ಯೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಹಿತ ಐವರ ವಿರುದ್ಧ ಎಫ್ಐಆರ್
ಬೈರತಿ ಬಸವರಾಜ್
ಬೆಂಗಳೂರು: ಹಲಸೂರು ಕೆರೆಯ ಸಮೀಪ ಮಂಗಳವಾರ ರಾತ್ರಿ ನಡೆದ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ(40) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೆ.ಆರ್. ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಹಿತ ಐವರ ವಿರುದ್ಧ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಗದೀಶ್, ಕಿರಣ್, ವಿಮಲ್, ಅನಿಲ್ ಎಂಬವರ ವಿರುದ್ದವೂ ಕೊಲೆಯಾದ ಶಿವಪ್ರಕಾಶ್ ತಾಯಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಮೀನು ವಿವಾದಕ್ಕೆ ಸಂಬಂಧಿಸಿ ಈ ಕೊಲೆ ನಡೆದಿದೆ ಎಂದು ಶಿವಪ್ರಕಾಶ್ ತಾಯಿ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಎಫ್ ಐಆರ್ ನಲ್ಲಿ ಬೈರತಿ ಬಸವರಾಜ್ ಅವರನ್ನು 5ನೇ ಆರೋಪಿಯಾಗಿ ಹೆಸರಿಸಲಾಗಿದೆ.
ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನನ್ನು ಮಂಗಳವಾರ ರಾತ್ರಿ ಹಲಸೂರು ಕೆರೆಯ ಸಮೀಪದ ಆತನ ಮನೆಯೆದುರು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕಾರಿನಲ್ಲಿ ಬಂದ 4-5 ಮಂದಿಯಿದ್ದ ದುಷ್ಕರ್ಮಿಗಳು ಶಿವಪ್ರಕಾಶ್ ನನ್ನು ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ದೂರಿನ ವಿವರ: "ಕಿತ್ತಕನೂರು ಬಳಿ ಖರೀದಿಸಿದ್ದ ಸೈಟ್ ವಿಚಾರದಲ್ಲಿ ಆರೋಪಿಗಳು ಶಿವಪ್ರಕಾಶ್ ಗೆ ಪ್ರಾಣ ಬೆದರಿಕೆ ಹಾಕುತ್ತಿದ್ದರು. ಮಂಗಳವಾರ ತಡರಾತ್ರಿ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದ 8-9 ಮಂದಿ ಮನೆಯ ಮುಂದೆ ಕಾರಿನ ಬಳಿ ನಿಂತಿದ್ದ ಶಿವಪ್ರಕಾಶ್‌ನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದಿದ್ದಾರೆ. ಆರೋಪಿಗಳು ಸಾಕಷ್ಟು ಬಾರಿ ಶಿವಪ್ರಕಾಶ್ ಗೆ ಜೀವ ಬೆದರಿಕೆ ಹಾಕಿದ್ದರು. ಮಾಜಿ ಸಚಿವ ಬೈರತಿ ಬಸವರಾಜ್, ಜಗದೀಶ್ ಮತ್ತು ಇತರರಿಂದ ತನಗೆ ಪ್ರಾಣ ಬೆದರಿಕೆಯಿದೆ ಎಂದು ಹಲವು ಬಾರಿ ಶಿವಪ್ರಕಾಶ್ ಹೇಳಿಕೊಂಡಿದ್ದ. ಶಾಸಕ ಭೈರತಿ ಬಸವರಾಜ್ ಅವರ ಕುಮ್ಮಕ್ಕಿನಿಂದಲೇ ಆರೋಪಿಗಳು ನನ್ನ ಮಗನನ್ನ ಹತ್ಯೆಗೈದಿದ್ದಾರೆ" ಎಂದು ಶಿವಪ್ರಕಾಶ್ ತಾಯಿ ವಿಜಯಲಕ್ಷ್ಮಿ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಕೊಲೆಗೆ ನನಗೂ ಸಂಬಂಧವಿಲ್ಲ: ಭೈರತಿ ಬಸವರಾಜ್
ಪ್ರಕರಣದ ಬಗ್ಗೆ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೇಳಿಕೆ ನೀಡಿದ್ದು, ಬಿಕ್ಲು ಶಿವ ಕೊಲೆ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ. ಕೊಲೆಯಾದವನ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ. ದೂರು ಕೊಟ್ಟ ತಕ್ಷಣ ಏಕಾಏಕಿ ತನ್ನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಯಾರೇ ದೂರು ಕೊಟ್ಟರೂ ಎಫ್ಐಆರ್ ದಾಖಲಿಸಬಹುದಾ? ಎಫ್ಐಆರ್ ದಾಖಲಿಸುವುದಕ್ಕೂ ಮುನ್ನ ಪೊಲೀಸರು ನನ್ನಿಂದ ಮಾಹಿತಿ ಪಡೆದಿದ್ದಾರಾ? ಈ ವಿಚಾರದಲ್ಲಿ ನನ್ನ ಹೆಸರು ತಂದಿದ್ದಕ್ಕೆ ತುಂಬಾ ಬೇಸರವಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶ ಇರಬಹುದು. ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.