×
Ad

ಕಬ್ಬನ್ ಪಾರ್ಕ್‍ನಲ್ಲಿ ‘ರೀಲ್ಸ್’ ಮಾಡಿದರೆ 500 ರೂ.ದಂಡ

Update: 2025-05-16 20:50 IST

PC : X

ಬೆಂಗಳೂರು : ಕಬ್ಬನ್ ಉದ್ಯಾನವನದಲ್ಲಿ ಪ್ರೀ/ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್, ಮಾಡಲಿಂಗ್ ಶೂಟ್ಸ್, ವೀಡಿಯೋ ಚಲನಚಿತ್ರ ಚಿತ್ರೀಕರಣ, ಕಿರುಚಿತ್ರಗಳು, ರೀಲ್ಸ್ ಶೂಟಿಂಗ್ ನಿಷೇಧಿಸಲಾಗಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ 500 ರೂ.ದಂಡ ಹಾಗೂ ಪದೇ ಪದೇ ಉಲ್ಲಂಘಿಸಿದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಇಲಾಖೆ ಎಚ್ಚರಿಕೆ ನೀಡಿದೆ.

ಶುಕ್ರವಾರ ಈ ಸಂಬಂಧ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಕಬ್ಬನ್ ಉದ್ಯಾನವನದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹಾಗೂ ಉದ್ಯಾನವನದ ಸಂರಕ್ಷಣಾ ಹಿತದೃಷ್ಟಿಯಿಂದ ಪಾರ್ಕ್‍ನಲ್ಲಿ ಅನುಮತಿಸಬಹುದಾದ, ನಿಷೇಧಿಸಿದ ಚಟುವಟಿಕೆಗಳು ಹಾಗೂ ಪಾಲಿಸಬೇಕಾದ ಇತರೆ ಅವಶ್ಯಕ ನಿಯಮಗಳನ್ನು ಪ್ರಕಟಿಸಿದೆ.

ಅವಕಾಶ: ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ವಿವಿಧ ಸರಕಾರಿ/ಖಾಸಗಿ ಸಂಸ್ಥೆಗಳು ಆಯೋಜಿಸುವ ವಾಕಾಥಾನ್ ಮತ್ತು ಮ್ಯಾರಾಥಾನ್ ಕಾರ್ಯಕ್ರಮಗಳು, ಸರಕಾರದ ವಿವಿಧ ಇಲಾಖೆಗಳು ಆಯೋಜಿಸುವ ಅರಿವು ಮೂಡಿಸುವ ಕಾರ್ಯಕ್ರಮಗಳು, ಗರಿಷ್ಠ 20 ಜನರಿರುವ ಹವ್ಯಾಸಿ ಓದುಗರು, ಬರವಣಿಗೆಗಾರರು ಆಸನಗಳನ್ನು ಬಳಸಿಕೊಳ್ಳವುದು. ಉದ್ಯಾನವನಕ್ಕೆ ಆಗಮಿಸುವ ಸಾರ್ವಜನಿಕರು, ಪ್ರವಾಸಿಗರು ಕ್ಯಾಮರಾಗಳನ್ನು ಬಳಸಬಹುದು. ಸರಕಾರಿ/ಅಧಿಕೃತ ನೋಂದಾಯಿತ ಚಾರಿಟಬಲ್ ಟ್ರಸ್ಟ್‌ ಗಳ ವತಿಯಿಂದ ಮಾತ್ರ ಆಯೋಜಿಸಲ್ಪಡುವ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಬಹುದು.

ನಿಷೇಧ: ಉದ್ಯಾನವನದ ಒಳರಸ್ತೆಗಳಲ್ಲಿ ಭಾರಿ ವಾಹನಗಳಾದ ಬಸ್ಸು, ಲಾರಿ, ಗೂಡ್ಸ್ ವಾಹನ ಹಾಗೂ ಆಟೋಗಳನ್ನು ನಿರ್ಬಂಧಿಸಲಾಗಿದೆ. ಧೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆ, ಪ್ಲಾಸ್ಟಿಕ್ ವಸ್ತುಗಳು, ಬಾಟಲಿ, ಪ್ಲಾಸ್ಟಿಕ್ ಚೀಲ. ಪೂಜಾ ಸಾಮಗ್ರಿ ಹಾಗೂ ತ್ಯಾಜ್ಯಗಳನ್ನು ಉದ್ಯಾನವನಕ್ಕೆ ತರುವುದು, ಎಲ್ಲೆಂದರಲ್ಲಿ ಹಾಕುವುದು/ ಎಸೆಯುವುದನ್ನು ನಿಷೇಧಿಸಿದೆ.

ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಿದೆ. ಉದ್ಯಾನವನದ ಆವರಣದಲ್ಲಿ ಅಸಭ್ಯ ವರ್ತನೆ, ಸಾರ್ವಜನಿಕರು/ಸಂಘ-ಸಂಸ್ಥೆಗಳು ಉದ್ಯಾನವನದ ಒಳಗಡೆ ಬ್ಯಾನರ್/ಪೋಸ್ಟ್‌ಗಳನ್ನು ಹಾಕುವಂತಿಲ್ಲ. ಸಸ್ಯ ಪ್ರಾಣಿ ಸಂಕುಲ, ಸಂಕುಲಗಳಿಗೆ ಉಂಟುಮಾಡುವ ಯಾವುದೇ ತರಹದ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಿದೆ.

ಪಾಲಿಸಬೇಕಾದ ನಿಯಮಗಳು: ಮಳೆ, ಗಾಳಿಯ ಸಂದರ್ಭದಲ್ಲಿ ಮರದ ಕೆಳಗೆ ನಿಲ್ಲಬಾರದು. ಉದ್ಯಾನವನದಲ್ಲಿರುವ ವಿದ್ಯುತ್ ಕಂಬ, ಪ್ಯಾನಲ್ ಬೋರ್ಡ್ ಹಾಗೂ ವಿದ್ಯತ್ ಜಂಕ್ಷನ್ ಬಾಕ್ಸ್‌ ಗಳಿಂದ ದೂರವಿರತಕ್ಕದ್ದು. ಉದ್ಯಾನವನದ ಮರದ ಪೊಟರೆ, ಬಿಲಗಳು, ಪೊದೆಗಳಲ್ಲಿ ಹಾಗೂ ಇತರೆ ಜಾಗಗಳಲ್ಲಿ ಹಾವುಗಳಿರುವ ಸಂಭವ ಇರುತ್ತದೆ ಎಚ್ಚರ ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News