×
Ad

ಬಿಜೆಪಿಗರು ತಿರಂಗಾ ಯಾತ್ರೆ ಬಿಟ್ಟು, ಟ್ರಂಪ್ ಯಾತ್ರೆ ಮಾಡಲಿ : ಸಂತೋಷ್ ಲಾಡ್

Update: 2025-05-15 23:49 IST

ಬೆಂಗಳೂರು : ಪಾಕಿಸ್ತಾನದ ವಿರುದ್ಧ ಯಾವ ಕಾರಣಕ್ಕಾಗಿ ಕದನ ವಿರಾಮ ಮಾಡಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಉತ್ತರಿಸಬೇಕು. ಜತೆಗೆ, ಬಿಜೆಪಿ ತಿರಂಗಾ ಯಾತ್ರೆ ಮಾಡುವುದು ಬೇಡ, ಬದಲಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾದ ಯಾತ್ರೆ ಮಾಡಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಗುರುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಗೋಗರೆದ ಕಾರಣ ಕದನ ವಿರಾಮಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಅದಕ್ಕೂ ಮೊದಲು ಅಮೆರಿಕದ ಅಧ್ಯಕ್ಷ ಟ್ರಂಪ್ ಕದನ ವಿರಾಮ ಪ್ರಸ್ತಾವಿಸಿದ್ದರು. ಅಮೆರಿಕ ಅಧ್ಯಕ್ಷರ ಮೂಲಕ ಕದನ ವಿರಾಮ ತಿಳಿದುಕೊಳ್ಳಬೇಕಾಯಿತು. ಟ್ರಂಪ್ ಹೇಳಿದ ಮಾದರಿಯಲ್ಲಿ ವ್ಯಾಪಾರಕ್ಕಾಗಿ ಯುದ್ಧ ನಿಲ್ಲಿಸಲಾಯಿತೇ ಎಂದು ಪ್ರಶ್ನಿಸಿದರು.

ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವ ಆಧಾರದಲ್ಲಿ ಕದನ ವಿರಾಮ ಘೋಷಿಸಲಾಗಿದೆ ಎಂಬುದು ದೇಶದ ಜನತೆಗೆ ಗೊತ್ತಾಗಬೇಕಾಗಿದೆ. ಇದನ್ನು ಪ್ರತಿಯೊಬ್ಬರೂ ಬಿಜೆಪಿ ನಾಯಕರನ್ನು ಪ್ರಶ್ನಿಸಬೇಕು. ಸರಕಾರಕ್ಕೆ ದೇಶದ ಜನತೆಯ ಬೆಂಬಲ ಇತ್ತು. ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಬೇಕು ಎಂಬ ನಿರೀಕ್ಷೆ ಇತ್ತು. ಆದರೆ, ಯಾವ ಆಧಾರದಲ್ಲಿ ಕದನ ವಿರಾಮ ಘೋಷಿಸಿದ್ದಾರೆ. ಎಲ್ಲವೂ ನಿಮ್ಮದೇ ನಿರ್ಧಾರವೇ ಎಂದು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ತಾವೇ ಸುಪ್ರೀಂ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ ಅವರು, ದೇಶದಲ್ಲಿ ಯಾರೂ ಅಂತಿಮ ಅಲ್ಲ. ಬರುತ್ತಾರೆ, ಹೋಗುತ್ತಾರೆ. ದೇಶವೇ ಅಂತಿಮ ಹೊರತು ವ್ಯಕ್ತಿಯಲ್ಲ. ಕಳೆದ 20 ದಿನಗಳಿಂದ ದೇಶದಲ್ಲಿ ಏನಾಗಿದೆ ಎಂದು ಜನರಿಗೆ ಗೊತ್ತಿದೆ. ದೇಶವನ್ನು ಎಲ್ಲ ಸೇನಾ ಪಡೆಗಳು ಕಾಪಾಡಿವೆ. ಪಾಕಿಸ್ತಾನದ ಮೇಲೆ ದಾಳಿ ನಡೆಸುವಲ್ಲಿ ಯಶಸ್ವಿ ಆಗಿದ್ದೇವೆ ಎಂದರು.

ಯಾವುದೇ ದಾಳಿ ನಡೆದಾಗಲೂ ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳುತ್ತದೆ. ಸೈನ್ಯಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಸೈನ್ಯ ಹೇಳಿದ ಮೇಲೆ ಕದನ ವಿರಾಮ ಮಾಡಲಾಯಿತೇ? ಈ ಬಗ್ಗೆ ಮೋದಿ ಸ್ಪಷ್ಟನೆ ನೀಡಬೇಕಲ್ಲವೇ? ಯುದ್ಧ ನಡೆದರೆ ಯಾವ ಪಕ್ಷಗಳು ಮಧ್ಯಪ್ರವೇಶ ಮಾಡಲ್ಲ. ಸೈನ್ಯಕ್ಕೆ ಮುಕ್ತ ಅವಕಾಶ ನೀಡಲಾಗುತ್ತದೆ. ಈ ಕದನ ವಿರಾಮ ಮಾಡಲು ಕಾರಣ ಯಾರು? ಇದಕ್ಕೆ ಮೋದಿ ಉತ್ತರ ನೀಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ನಂತರ ಪ್ರಧಾನಿ ಮೋದಿ ವಿದೇಶ ಪ್ರವಾಸ ಮೊಟಕುಗೊಳಿಸಿ ವಾಪಸ್ ಆಗುತ್ತಾರೆ. ವಾಪಸ್ ಬಂದ ನಂತರ ಅವರು ಬಿಹಾರ ಚುನಾವಣಾ ಪ್ರಚಾರಕ್ಕೆ ತೆರಳುತ್ತಾರೆ. ಆದರೆ, ಸರ್ವಪಕ್ಷಗಳ ಸಭೆಗೆ ಭಾಗವಹಿಸುವುದೇ ಇಲ್ಲ. ಒಂದು ರೀತಿಯಲ್ಲಿ ತಾನೇ ಸುಪ್ರೀಂ ಎಂಬಂತೆ ವರ್ತಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News